ಚತ್ತೀಸ್ ಗಢ | 35 ನಕ್ಸಲೀಯರು ಶರಣಾಗತ
ಸಾಂದರ್ಭಿಕ ಚಿತ್ರ
ದಂತೇವಾಡ (ಚತ್ತೀಸ್ ಗಢ) : ದಂತೇವಾಡ ಜಿಲ್ಲೆಯಲ್ಲಿ 35 ಮಾವೋವಾದಿಗಳು ರವಿವಾರ ಶರಣಾಗತರಾಗಿದ್ದಾರೆ.
‘‘ಮರಳಿ ಮನೆಗೆ’’ ಅಭಿಯಾನದ ಅಡಿಯಲ್ಲಿ 35 ಮಾವೋವಾದಿಗಳು ದಂತೇವಾಡ ವಲಯ ಪೊಲೀಸ್ ಡಿಐಜಿ ಕಾಮಲೋಚನ್ ಕಶ್ಯಪ್, ಸಿಆರ್ಪಿಎಫ್ ಹಾಗೂ ಪೊಲೀಸ್ನ ಹಿರಿಯ ಅಧಿಕಾರಿಗಳ ಮುಂದೆ ಶರಣಾಗತರಾದರು.
‘‘ಟೊಳ್ಳು ಸಿದ್ಧಾಂತ, ತಾರತಮ್ಯದ ನಡತೆ, ನಕ್ಸಲೀಯರ ನಿರ್ಲಕ್ಷ್ಯ ಹಾಗೂ ಕಿರುಕುಳದಿಂದ ನಿರಾಶೆಗೊಂಡ 35 ನಕ್ಸಲೀಯರು ಶರಣಾಗತರಾಗಿದ್ದಾರೆ. ಹಿಂಸಾಚಾರವನ್ನು ತ್ಯಜಿಸಿದ್ದಾರೆ ಹಾಗೂ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ವ್ಯಕ್ತಪಡಿಸಿದ್ದಾರೆ’’ ಎಂದು ದಂತೇವಾಡದ ಪೊಲೀಸ್ ಅಧೀಕ್ಷಕ ಗೌರವ್ ರಾಯ್ ತಿಳಿಸಿದ್ದಾರೆ.
ಇವರು ಈ ಹಿಂದೆ ಭೈರಮಗಢ, ಮಾಲಂಗಾರ್ ಹಾಗೂ ಕಾಟೇಕಲ್ಯಾಣ್ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಶರಣಾಗತರಾದವರಲ್ಲಿ ಮೂವರ ತಲೆಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಶರಣಾಗತರಾದ ನಕ್ಸಲೀಯರಿಗೆ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ಚತೀಸ್ ಗಢ ಸರಕಾರದ ಪುನರ್ವಸತಿ ಯೋಜನೆ ಅಡಿಯಲ್ಲಿ ಪ್ರೋತ್ಸಾಹಕವಾಗಿ ತಲಾ 25 ಸಾವಿರ ರೂ. ನಗದು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.