ಚತ್ತೀಸ್ ಗಢ | ಅಕ್ಕಿ ಕಳವುಗೈದ ಶಂಕೆ ದಲಿತ ವ್ಯಕ್ತಿಯ ಥಳಿಸಿ ಹತ್ಯೆ
ಸಾಂದರ್ಭಿಕ ಚಿತ್ರ | PC : freepik.com
ರಾಯಪುರ : ಅಕ್ಕಿ ಗೋಣಿ ಕಳವುಗೈಯಲು ಯತ್ನಿಸಿರುವ ಶಂಕೆಯಲ್ಲಿ 50 ವರ್ಷದ ದಲಿತ ವ್ಯಕ್ತಿಯೋರ್ವರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಚತ್ತೀಸ್ ಗಢದ ರಾಯಗಢ ಜಿಲ್ಲೆಯಲ್ಲಿ ರವಿವಾರ ನಡೆದಿದೆ.
ಗುಂಪಿನಿಂದ ಥಳಿತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿಯನ್ನು ಪಂಚರಾಮ್ ಸಾರ್ಥಿ ಆಲಿಯಾಸ್ ಬುಟು ಎಂದು ಗುರುತಿಸಲಾಗಿದೆ.
ಡೂಮರಪಾಲಿ ಗ್ರಾಮದಲ್ಲಿ ರವಿವಾರ ಮುಂಜಾನೆ ಸುಮಾರು 2 ಗಂಟೆ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ವಿರೇಂದರ್ ಸಿದಾರ್, ಅಜಯ್ ಪ್ರಧಾನ್ ಹಾಗೂ ಅಶೋಕ್ ಪ್ರಧಾನ್ರನ್ನು ಪೊಲೀಸರು ಬಂಧಿಸಿದ್ದಾರೆ.
‘‘ನಾನು ನನ್ನ ಮನೆಯಲ್ಲಿ ನಿದ್ರಿಸುತ್ತಿದ್ದೆ. ಶಬ್ದ ಕೇಳಿ ಎಚ್ಚರವಾಯಿತು. ನೋಡಿದಾಗ ಸಾರ್ಥಿ ಅಕ್ಕಿ ಕಳವುಗೈಯಲು ಯತ್ನಿಸುತ್ತಿದ್ದ. ಅನಂತರ ನಾನು ನೆರೆ ಮನೆಯ ಅಜಯ್ ಪ್ರಧಾನ್ ಹಾಗೂ ಅಶೋಕ್ ಪ್ರಧಾನ್ ನನ್ನು ಕರೆದೆ. ನಾವು ಸಾರ್ಥಿಯನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿದೆವು’’ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಸಿದಾರ್ ತಿಳಿಸಿದ್ದಾನೆ.
‘‘ಆತ (ಸಿದಾರ್) ಹಾಗೂ ನೆರೆಯವರು ಸಾರ್ಥಿಯನ್ನು ಮರಕ್ಕೆ ಕಟ್ಟಿ ಹಾಕಿದರು. ದೊಣ್ಣೆಯಿಂದ ಥಳಿಸಿದರು. ಇದರಿಂದ ಸಾರ್ಥಿ ಸಾವನ್ನಪ್ಪಿದರು’’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರಾಮದ ಸರಪಂಚರು ಘಟನೆಯ ಕುರಿತು ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬೆಳಗ್ಗೆ 6 ಗಂಟೆಗೆ ಘಟನಾ ಸ್ಥಳಕ್ಕೆ ಆಗಮಿಸಿದಾಗ ಕೂಡ ಸಾರ್ಥಿ ಮರಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲೇ ಇದ್ದರು ಹಾಗೂ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಅಜಯ್ ಪ್ರಧಾನ್, ಅಶೋಕ್ ಪ್ರಧಾನ್ರೊಂದಿಗೆ ಸಿದಾರ್ನನ್ನು ಬಂಧಿಸಲಾಗಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ರಾಜಗಢ ಪೊಲೀಸ್ ಅಧೀಕ್ಷಕ ದಿವ್ಯಾಂಗ್ ಪಟೇಲ್ ತಿಳಿಸಿದ್ದಾರೆ.
ಇದು ಗುಂಪಿನಿಂದ ಥಳಿಸಿ ಹತ್ಯೆ ಎಂದು ಸ್ಥಳೀಯ ಹೋರಾಟಗಾರರು ಪ್ರತಿಪಾದಿಸಿದ್ದಾರೆ. ಆದರೆ, ಇದು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (2)ರ ಅಡಿಯಲ್ಲಿ ಗುಂಪಿನಿಂದ ಥಳಿಸಿ ಹತ್ಯೆಯ ಕಾನೂನು ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.