ಚೆನ್ನೈ : ಕರ್ನಾಟಕ ಮೂಲದ ಜವಳಿ ಉದ್ಯಮಿ ಮನೆ ಮೇಲೆ ಐಟಿ ದಾಳಿ
Photo : ANI
ಚೆನ್ನೈ : ಕರ್ನಾಟಕ ಮೂಲದ ಜವಳಿ ಉದ್ಯಮಿಯ ಚೆನ್ನೈಯ ತ್ಯಾಗರಾಯ ನಗರ್ ರಾಧಾಕೃಷ್ಣ ಬೀದಿಯಲ್ಲಿರುವ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಮನೆಯ ಹೊರಗೆ ಆದಾಯ ತೆರಿಗೆ ಅಧಿಕಾರಿಗಳು ಕಾರು ನಿಲ್ಲಿಸಿರುವುದು ಹಾಗೂ ಭದ್ರತೆಗಾಗಿ ಚೆನ್ನೈ ಪೊಲೀಸರನ್ನು ನಿಯೋಜಿಸಿರುವುದು ವೀಡಿಯೊಗಳಲ್ಲಿ ಕಂಡು ಬಂದಿದೆ.
ಈ ಹಿಂದೆ ನ.7ರಂದು ತಮಿಳುನಾಡು ಲೋಕೋಪಯೋಗಿ ಹಾಗೂ ಹೆದ್ದಾರಿ ಖಾತೆ ಸಚಿವ ಇ.ವಿ. ವೇಲು ಅವರಿಗೆ ಸಂಬಂಧಿಸಿದ ತಿರುವಣ್ಣಮಲೈಯಲ್ಲಿರುವ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಸಚಿವರಿಗೆ ಸಂಬಂಧವಿದೆ ಎಂದು ಹೇಳಲಾದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಇದಕ್ಕೂ ಮುನ್ನ ಈ ಸಂದರ್ಭ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ರಾಧಾ ಎಂಜಿನಿಯರಿಂಗ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಚೆನ್ನೈಯ ಸುಮಾರು 10 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಅಕ್ಟೋಬರ್ನಲ್ಲಿ ಆದಾಯ ತೆರಿಗೆ ಇಲಾಖೆ ಡಿಎಂಕೆ ಸಂಸದ ಎಸ್. ಜಗತ್ರಕ್ಷಕನ್ ಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿ ಅರಕ್ಕೋಣಂ ಸಂಸದರಾಗಿರುವ ಅವರ ಆದ್ಯಾರ್ನಲ್ಲಿರುವ ನಿವಾಸ, ಕಚೇರಿ ಹಾಗೂ ಕೆಲವು ಶಿಕ್ಷಣ ಸಂಸ್ಥೆಗಳು ಸೇರಿದಂತೆ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.