ಛತ್ತೀಸ್ಗಡ | ಎನ್ಕೌಂಟರ್ ನಲ್ಲಿ 12 ನಕ್ಸಲರ ಹತ್ಯೆ
ಸಾಂದರ್ಭಿಕ ಚಿತ್ರ | PC : PTI
ಬಿಜಾಪುರ್ : ಚತ್ತೀಸ್ಗಡದ ಬಿಜಾಪುರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್ಕೌಂಟರ್ ನಲ್ಲಿ ಕನಿಷ್ಠ 12 ಮಂದಿ ನಕ್ಸಲೀಯರನ್ನು ಹತ್ಯೆಗೈಯಲಾಗಿದೆ ಎಂದು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತಿಳಿಸಿದ್ದಾರೆ.
ಗಂಗಲೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಗ್ರಾಮದ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯ ತಂಡವೊಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಕಾಳಗ ನಡೆದಿದೆ.
‘‘ಗಂಗಲೂರು ಪ್ರದೇಶದಲ್ಲಿ ಗುಂಡಿನ ಚಕಮಕಿ ಅಂತ್ಯಗೊಂಡಿದೆ. ಕಾಳಗ ನಡೆದ ಸ್ಥಳದಲ್ಲಿ ಈವರೆಗೆ 12 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ’’ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಚತ್ತೀಸ್ಗಡದಲ್ಲಿ ನಕ್ಸಲೀಯರ ವಿರುದ್ಧ ಭದ್ರತಾಪಡೆಗಳು ನಡೆಸಿದ ಮೂರನೇ ಅತಿ ದೊಡ್ಡ ಎನ್ಕೌಂಟರ್ ಇದಾಗಿದೆ. ಎಪ್ರಿಲ್ 16ರಂದು ಕಾಂಕೇರ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಕನಿಷ್ಠ 29 ನಕ್ಸಲೀಯರು ಸಾವನ್ನಪ್ಪಿದ್ದರು. ಎಪ್ರಿಲ್ 29ರಂದು ನಾರಾಯಣಪುರ ಹಾಗೂ ಕಾಂಕೇರ್ ಜಿಲ್ಲೆಗಳ ಕಗಡಿಯಲ್ಲಿ ಭದ್ರತಾಪಡೆಗಳು ನಡೆಸಿದ ಇನ್ನೊಂದು ಎನ್ಕೌಂಟರ್ನಲ್ಲಿ ಹತ್ತು ನಕ್ಸಲರು ಸಾವನ್ನಪ್ಪಿದ್ದರು.
ಚತ್ತೀಸ್ಗಡದ ಬಸ್ತಾರ್ ಪ್ರಾಂತದಲ್ಲಿ 2024ರಲ್ಲಿ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಸುಮಾರು 103 ನಕ್ಸಲರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.