ಛತ್ತೀಸ್ ಗಢ: 30 ಮಂದಿ ಮಾವೋವಾದಿಗಳ ಹತ್ಯೆ
PC : NDTV
ಹೊಸ ದಿಲ್ಲಿ: ನಾರಾಯಣಪುರ್-ದಾಂತೇವಾಡ ಅರಣ್ಯ ಭಾಗದಲ್ಲಿ ಭದ್ರತಾ ಪಡೆಗಳು 30 ಮಂದಿ ಮಾವೋವಾದಿಗಳನ್ನು ಹತ್ಯೆಗೈದಿದ್ದು, ಇತ್ತೀಚಿನ ದಿನಗಳಲ್ಲಿ ಮಾವೋವಾದಿಗಳ ವಿರುದ್ಧ ದೊರೆತಿರುವ ಭಾರಿ ಯಶಸ್ಸಿದು ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.
ನಿನ್ನೆ ಮಾವೋ ನಿಗ್ರಹ ಕಾರ್ಯಾಚರಣೆಗೆ ಚಾಲನೆ ನೀಡಿದ್ದ ಜಿಲ್ಲಾ ಮೀಸಲು ಯೋಧರು ಹಾಗೂ ವಿಶೇಷ ಕಾರ್ಯಪಡೆಗೆ ಇಂದು ಮಧ್ಯಾಹ್ನ 12.30ರ ವೇಳೆಗೆ ಮಾವೋವಾದಿ ಉಗ್ರರು ಮುಖಾಮುಖಿಯಾಗಿದ್ದಾರೆ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಎಕೆ ಸರಣಿಯ ಹಲವಾರು ರೈಫಲ್ ಗಳು ಸೇರಿದಂತೆ ಮಾರಣಾಂತಿಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಮಾವೋವಾದಿಗಳ ದೊಡ್ಡ ವಾಸ್ತವ್ಯದ ಬಗ್ಗೆ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ನಡೆದ ಈ ಜಂಟಿ ಕಾರ್ಯಾಚರಣೆಗೆ ಓರ್ಚಾ ಮತ್ತು ಬರ್ಸೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋವೆಲ್, ನೆಂದೂರ್ ಹಾಗೂ ತುಲ್ತುಲಿ ಗ್ರಾಮಗಳಿಗೆ ಪ್ರತ್ಯೇಕ ತಂಡಗಳನ್ನು ರವಾನಿಸಲಾಗಿತ್ತು. ಅವರು ಈ ಗ್ರಾಮಗಳಲ್ಲಿ ಶೋಧ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು.
ಇಂದು ಮಧ್ಯಾಹ್ನ ನೆಂದೂರ್-ತುಲ್ತುಲಿ ಗ್ರಾಮಗಳ ಬಳಿಯ ಅರಣ್ಯ ಪ್ರದೇಶಗಳಲ್ಲಿ ಎನ್ಕೌಂಟರ್ ಸ್ಫೋಟಗೊಂಡಿತು. ಅರಣ್ಯದೊಳಗೆ ಪರಾರಿಯಾಗಿರುವ ಇನ್ನುಳಿದ ಕೆಲವು ಮಾವೋವಾದಿಗಳ ಪತ್ತೆಗಾಗಿ ಭದ್ರತಾ ಪಡೆಗಳು ಭಾರಿ ಎಚ್ಚರಿಕೆಯೊಂದಿಗೆ ತಮ್ಮ ಕಾರ್ಯಾಚರಣೆ ಮುಂದುವರಿಸಿವೆ ಎಂದು ವರದಿಯಾಗಿದೆ.