ಛತ್ತೀಸ್ಗಢ: ಗುಂಡಿನ ಕಾಳಗ ಮೂವರು ಶಂಕಿತ ನಕ್ಸಲೀಯರ ಹತ್ಯೆ
ಸಾಂದರ್ಭಿಕ ಚಿತ್ರ | PC : PTI
ಸುಕ್ಮಾ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ ಮೂವರು ಶಂಕಿತ ನಕ್ಸಲೀಯರು ಮೃತಪಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಹೇಳಿದ್ದಾರೆ.
ಛತ್ತೀಸ್ಗಢದ ಸುಕ್ಮಾ-ಬಿಜಾಪುರ ಗಡಿಯ ಅರಣ್ಯದಲ್ಲಿ ಭದ್ರತಾ ಪಡೆ ಹಾಗೂ ಶಂಕಿತ ನಕ್ಸಲೀಯರ ನಡುವೆ ಗುರುವಾರ ಗುಂಡಿನ ಕಾಳಗ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಗುಂಡಿನ ಕಾಳಗದಲ್ಲಿ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್ಜಿ), ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ಹಾಗೂ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ಜಂಗಲ್ ವಾರ್ಫೇರ್ ಘಟಕ ಕೋಬ್ರಾ ಪಾಲ್ಗೊಂಡಿತ್ತು.
ಇನ್ನೊಂದು ಘಟನೆಯಲ್ಲಿ ಬಿಜಾಪುರ ಜಿಲ್ಲೆಯ ಅವಪಲ್ಲಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮುರ್ದಾನ ಗ್ರಾಮದಲ್ಲಿ ರಾಜ್ಯ ಪೊಲೀಸ್ ಹಾಗೂ ಸಿಆರ್ಪಿಎಫ್ನ 229 ಬೆಟಾಲಿಯನ್ ನಡೆಸಿದ ಜಂಟಿ ಕಾರ್ಯಾಚರಣೆ ಸಂದರ್ಭ ಸುಧಾರಿತ ಸ್ಪೋಟಕ ಸಾಧನ (ಐಇಡಿ) ಪತ್ತೆ ಮಾಡಲಾಗಿದೆ ಹಾಗೂ ನಿಷ್ಕ್ರಿಯಗೊಳಿಸಲಾಗಿದೆ.
ನಕ್ಸಲೀಯರು ಖಾಲಿ ಬಿಯರ್ ಬಾಟಲಿಗಳಲ್ಲಿ ಎರಡು ಐಇಡಿಗಳನ್ನು ಸಿದ್ಧಪಡಿಸಿ ಇರಿಸಿದ್ದರು. ಅದನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.