ಛತ್ತೀಸ್ ಗಢ |ಅಬಕಾರಿ ಹಗರಣ: ಕಾಂಗ್ರೆಸ್ ಶಾಸಕ ಕವಸಿ ಲಖ್ಮಾರನ್ನು ಬಂಧಿಸಿದ ಈಡಿ
ಕಾಂಗ್ರೆಸ್ ಶಾಸಕ ಕವಸಿ ಲಖ್ಮಾ | PC : PTI
ರಾಯ್ಪುರ: ಅಬಕಾರಿ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಅಬಕಾರಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಕವಸಿ ಲಖ್ಮಾರನ್ನು ಬುಧವಾರ ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ರಾಯ್ಪುರ, ಸುಕ್ಮಾ ಹಾಗೂ ಧಮತಾರಿ ಜಿಲ್ಲೆಗಳಲ್ಲಿರುವ ಮಾಜಿ ಸಚಿವ ಕವಸಿ ಲಖ್ಮಾ ಹಾಗೂ ಅವರ ಪುತ್ರ ಹರೀಶ್ ಲಖ್ಮಾ ನಿವಾಸಗಳ ಮೇಲೆ ಡಿಸೆಂಬರ್ 28ರಂದು ಜಾರಿ ನಿರ್ದೇಶನಾಲಯ(ಈಡಿ) ದಾಳಿ ನಡೆಸಿತ್ತು.
ಇದರ ಬೆನ್ನಿಗೇ, ಕವಸಿ ಲಖ್ಮಾ (71) ಹಾಗೂ ಅವರ ಪುತ್ರನನ್ನು ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ) ವಿಚಾರಣೆ ನಡೆಸಿತ್ತು.
ಬುಧವಾರ ಇಲ್ಲಿನ ಪಚ್ಪೇಡಿ ನಾಕಾ ಪ್ರದೇಶದಲ್ಲಿರುವ ಜಾರಿ ನಿರ್ದೇಶನಾಲಯ(ಈಡಿ)ದ ಕಚೇರಿಗೆ ವಿಚಾರಣೆಗಾಗಿ ಕರೆಸಿಕೊಳ್ಳಲಾಗಿದ್ದ ಲಖ್ಮಾರನ್ನು ನಂತರ ಬಂಧಿಸಲಾಯಿತು ಎಂದು ವರದಿಯಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಕವಸಿ ಲಖ್ಮಾ ಅಬಕಾರಿ ಹಗರಣದಲ್ಲಿ ನಗದು ಸ್ವೀಕರಿಸಿದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಇದಕ್ಕೂ ಮುನ್ನ ಬಿಡುಗಡೆ ಮಾಡಿದ್ದ ತನ್ನ ಪ್ರಕಟಣೆಯಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಆರೋಪಿಸಿತ್ತು.