ಚತ್ತೀಸ್ಗಡ: ಬಿಜೆಪಿ ಸಂಸದನ ಬೆಂಗಾವಲು ವಾಹನ ಡಿಕ್ಕಿ ಹೊಡೆದು ಮೂವರು ಬೈಕ್ ಸವಾರರು ಮೃತ್ಯು

ಸಾಂದರ್ಭಿಕ ಚಿತ್ರ
ರಾಯ್ಪುರ: ಚತ್ತೀಸ್ಗಡದ ಬಿಜೆಪಿ ಲೋಕಸಭಾ ಸಂಸದನೊಬ್ಬನ ಬೆಂಗಾವಲು ವಾಹನವೊಂದು ಮೋಟಾರ್ಬೈಕ್ ಡಿಕ್ಕಿ ಹೊಡೆದು, ಸಂಭವಿಸಿದ ಅವಘಡದಲ್ಲಿ ಬೈಕ್ನಲ್ಲಿದ್ದ ಮೂವರು ಸವಾರರು ಸಾವನ್ನಪ್ಪಿದ್ದಾರೆ.
ಕಾಂಕೇರ್ ಜಿಲ್ಲೆಯ ಪೊಡ್ಗಾಂವ್ ಎಂಬಲ್ಲಿ ಮಂಗಳವಾರ ನಸುಕಿನಲ್ಲಿ ಈ ಘಟನೆ ನಡೆದಿದೆ. ಕಾಂಕೇರ್ನ ಬಿಜೆಪಿ ಸಂಸದ ಭೋಜರಾಜ್ ನಾಗ್ ಅವರು ಬಾನುಪ್ರತಾಪ್ಪುರದಿಂದ ಆಂತಗಢದಲ್ಲಿರುವ ಮನೆಗೆ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ.
ಕಾಂಕೇರ್ನ ಲೋಕಸಭಾ ಸದಸ್ಯರ ಬೆಂಗಾವಲು ವಾಹನವು ರಸ್ತೆಯಲ್ಲಿದ್ದ ಬಿಡಾಡಿ ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆದಿತ್ತು.ಬೈಕ್ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಪಡೆಯುತ್ತಿದ್ದಾಗಲೇ ಕೊನೆಯುಸಿರೆಳೆದರು ಎಂದು ಕಾಂಕೇರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಂದಿರಾ ಕಲ್ಯಾಣ್ ತಿಳಿಸಿದರು.
ಮೃತಪಟ್ಟವರನ್ನು ತಾಮೇಶ್ವರ್ ದೆಹಾರಿ, ಗಿರಿಧಾರಿ ಸಮರ್ಥ ಹಾಗೂ ಕಮಲೇಶ್ವರ್ ಸಮರ್ಥ್ ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.