ಛತ್ತೀಸ್ ಗಡ | ರೈಲಿನಲ್ಲಿ ಆಕಸ್ಮಿಕ ಗುಂಡು ಹಾರಾಟ ; ಕಾನ್ಸ್ಟೇಬಲ್ ಮೃತ್ಯು, ಪ್ರಯಾಣಿಕನಿಗೆ ಗಾಯ
ಸಾಂದರ್ಭಿಕ ಚಿತ್ರ | Photo; PTI
ರಾಯಪುರ : ಬಿಹಾರದ ಛಾಪ್ರಾದಿಂದ ಛತ್ತೀಸ್ ಗಡದ ದುರ್ಗಕ್ಕೆ ಚಲಿಸುತ್ತಿದ್ದ ಸಾರನಾಥ ಎಕ್ಸ್ಪ್ರೆಸ್ ರೈಲು ಶನಿವಾರ ನಸುಕಿನ 5:45ಕ್ಕೆ ರಾಯಪುರ ನಿಲ್ದಾಣವನ್ನು ತಲುಪುತ್ತಿದ್ದಂತೆ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಕಾನ್ಸ್ಟೇಬಲ್ ಬಳಿಯಿದ್ದ ರೈಫಲ್ನಿಂದ ಎರಡು ಸುತ್ತು ಗಂಡುಗಳು ಆಕಸ್ಮಿಕವಾಗಿ ಹಾರಿದ ದುರ್ಘಟನೆ ಸಂಭವಿಸಿದೆ. ದುರಂತದಲ್ಲಿ ಕಾನ್ಸ್ಟೇಬಲ್ ದಿನೇಶ ಚಂದ್ರ (30) ಮೃತಪಟ್ಟಿದ್ದು, ಪ್ರಯಾಣಿಕ ಮುಹಮ್ಮದ್ ದಾನಿಷ್ (24) ಗಾಯಗೊಂಡಿದ್ದಾರೆ.
ರಾಜಸ್ಥಾನ ಮೂಲದ ಚಂದ್ರ ಶುಕ್ರವಾರ ಇತರ ಮೂವರೊಂದಿಗೆ ಗಸ್ತು ಕರ್ತವ್ಯದಲ್ಲಿದ್ದು, ಶನಿವಾರ ರಾಯಪುರಕ್ಕೆ ಮರಳುತ್ತಿದ್ದರು. ಘಟನೆ ಸಂಭವಿಸಿದಾಗ ಚಂದ್ರ ಮತ್ತು ಅವರ ಸಹೋದ್ಯೋಗಿ ರವೀಂದ್ರ ಗುಜರ್ ಬೋಗಿಯ ಬಾಗಿಲಿನ ಬಳಿ ನಿಂತುಕೊಂಡಿದ್ದರು. ರಾಯಪುರ ನಿಲ್ದಾಣದಲ್ಲಿ ಗುಜರ್ ಇಳಿದಿದ್ದು,ಹಿಂದಿದ್ದ ಚಂದ್ರ ತನ್ನ ರೈಫಲ್ನ್ನು ಎತ್ತಿಕೊಂಡಾಗ ಅದರಿಂದ ಆಕಸ್ಮಿಕವಾಗಿ ಎರಡು ಸುತ್ತು ಗುಂಡುಗಳು ಹಾರಿದ್ದವು.
ಒಂದು ಗುಂಡು ಚಂದ್ರ ಎದೆಗೆ ಹೊಕ್ಕಿದ್ದರೆ ಇನ್ನೊಂದು ಅಪ್ಪರ್ ಬರ್ತ್ ಸೀಟಿನಿಂದ ತೂರಿ ಅಲ್ಲಿ ಮಲಗಿದ್ದ ದಾನಿಷ್ ಹೊಟ್ಟೆಗೆ ಬಡಿದಿತ್ತು.
ರೈಫಲ್ ಬಗ್ಗೆ ಚಂದ್ರ ಎಚ್ಚರಿಕೆ ವಹಿಸಿರಲಿಲ್ಲ, ಅದು ಲೋಡ್ ಆಗಿತ್ತು ಮತ್ತು ಅದನ್ನು ಲಾಕ್ ಮಾಡಿರಲಿಲ್ಲ ಎಂದು ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಚಂದ್ರ ಮತ್ತು ದಾನಿಷ್ರನ್ನು ಆಸ್ಪತ್ರೆಗೆ ದಾಖಲಿಸಲಾತ್ತು. ಚಿಕಿತ್ಸೆ ಫಲಕಾರಿಯಗದೆ ಚಂದ್ರ ಮೃತಪಟ್ಟಿದ್ದರೆ ದಾನಿಷ್ ದೇಹಸ್ಥಿತಿ ಸ್ಥಿರವಾಗಿದೆ ಎಂದು ರೈಲ್ವೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ದಾನಿಷ್ ಉತ್ತರ ಪ್ರದೇಶ ನಿವಾಸಿಯಾಗಿದ್ದು, ತನ್ನ ತಂದೆಯನ್ನು ಚಿಕಿತ್ಸೆಗಾಗಿ ಭಿಲಾಯಿಗೆ ಕರೆದೊಯ್ಯುತ್ತಿದ್ದರು ಎಂದು ರಾಯಪುರ ರೈಲ್ವೆ ಪೋಲೀಸರು ತಿಳಿಸಿದರು.