ಛತ್ತೀಸ್ ಗಡ : ಎನ್ ಕೌಂಟರ್ ನಲ್ಲಿ ಕನಿಷ್ಠ 18 ಮಾವೋವಾದಿಗಳ ಹತ್ಯೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾಪಡೆಗಳು ಕನಿಷ್ಠ 18 ಮಂದಿ ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ, ಘಟನೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎನ್ಕೌಂಟರ್ ಇನ್ನೂ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಐಕೆ ಎಲೆಸೆಲಾ ತಿಳಿಸಿದ್ದಾರೆ. ಕಂಕೇರ್ ಜಿಲ್ಲೆಯಲ್ಲಿ ಎಪ್ರಿಲ್ 26 ರಂದು ಲೋಕಸಭಾ ಚುನಾವಣೆ ನಡೆಯಲಿದೆ.
2008 ರಲ್ಲಿ ರಾಜ್ಯದಲ್ಲಿ ಮಾವೋವಾದಿ ಚಟುವಟಿಕೆಗಳನ್ನು ಮಟ್ಟಹಾಕಲು ಸ್ಥಾಪಿಸಲಾದ ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ಗಡಿ ಭದ್ರತಾ ಪಡೆಗಳು ಮಧ್ಯಾಹ್ನ 1.30ಕ್ಕೆ ಜಂಟಿ ಕಾರ್ಯಾಚರಣೆ ನಡೆಸಿದಾಗ ಗುಂಡಿನ ದಾಳಿ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಗಡಿ ಭದ್ರತಾ ಪಡೆಗಳೊಂದಿಗೆ ರಾಜ್ಯ ಪೊಲೀಸ್ ಪಡೆಯ ಎರಡೂ ಘಟಕಗಳಾದ ಡಿಆರ್ಜಿ ಮತ್ತು ಬಸ್ತಾರ್ ಫೈಟರ್ಸ್ನ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಅರಣ್ಯ ಪ್ರದೇಶವನ್ನು ಸುತ್ತುವರಿದು ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದಾಗ ಮಾವೋವಾದಿಗಳ ತಂಡ ಮನಬಂದಂತೆ ಗುಂಡು ಹಾರಿಸಿದ್ದ ಪರಿಣಾಮ ಗುಂಡಿನ ಕಾಳಗ ಪ್ರಾರಂಭವಾಯಿತು ಎಂದು ತಿಳಿದು ಬಂದಿದೆ.
ಕಳೆದ ವರ್ಷ ನವೆಂಬರ್ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿ ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿತ್ತು.