ಛತ್ತೀಸ್ ಗಡ ಸಂಪುಟ ವಿಸ್ತರಣೆ : ಒಂಭತ್ತು ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ
ವಿಷ್ಣುದೇವ ಸಾಯಿ | Photo: ANI
ರಾಯಪುರ: ಶುಕ್ರವಾರ ಛತ್ತೀಸ್ ಗಡ ಮುಖ್ಯಮಂತ್ರಿ ವಿಷ್ಣುದೇವ ಸಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಒಂಭತ್ತು ನೂತನ ಸಚಿವರು ಸೇರ್ಪಡೆಗೊಂಡಿದ್ದು, ಇದರೊಂದಿಗೆ ಸಂಪುಟದ ಬಲ 12ಕ್ಕೇರಿದೆ.
ಇಲ್ಲಿಯ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಿಶ್ವಭೂಷಣ ಹರಿಚಂದನ ಅವರು ಓರ್ವ ಮಹಿಳೆ ಸೇರಿದಂತೆ ಒಂಭತ್ತು ಶಾಸಕರಿಗೆ ಪ್ರಮಾಣ ವಚನವನ್ನು ಬೋಧಿಸಿದರು.
ಸಾಯಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳಾದ ಅರುಣ ಸಾವೊ ಮತ್ತು ವಿಜಯ ಶರ್ಮಾ ಅವರು ಡಿ.13ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.
ನೂತನ ಸಚಿವರಲ್ಲಿ ಎಂಟು ಬಾರಿಯ ಶಾಸಕ ಬ್ರಿಜ್ಮೋಹನ ಅಗರ್ವಾಲ್, ಮಾಜಿ ಸಚಿವರಾದ ರಾಮವಿಚಾರ ನೇತಂ, ಕೇದಾರ ಕಶ್ಯಪ ಮತ್ತು ದಯಾಳದಾಸ ಬಘೇಲ್ ಅವರು ಸೇರಿದ್ದಾರೆ.
ವಿಸ್ತರಣೆಯ ಬಳಿಕ ಸಂಪುಟವು ಆರು ಒಬಿಸಿ, ಮೂವರು ಎಸ್ಟಿ, ಓರ್ವ ಎಸ್ಸಿ ಮತ್ತು ಇಬ್ಬರು ಸಾಮಾನ್ಯ ವರ್ಗದ ಸಚಿವರನ್ನು ಒಳಗೊಂಡಿದೆ. ಲಕ್ಷ್ಮಿ ರಾಜವಾಡೆ ಸಂಪುಟದಲ್ಲಿ ಏಕೈಕ ಮಹಿಳೆಯಾಗಿದ್ದಾರೆ.
ಛತ್ತೀಸ್ ಗಡ ವಿಧಾನ ಸಭೆಯು 90 ಸ್ಥಾನಗಳನ್ನು ಹೊಂದಿದ್ದು, ಸಂಪುಟವು ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 13 ಸಚಿವರನ್ನು ಹೊಂದಿರಬಹುದಾಗಿದೆ.