ಕೊಲೆಯಾದ ಪತ್ರಕರ್ತನ ಕುಟುಂಬಕ್ಕೆ 10 ಲಕ್ಷ ರೂ. ಆರ್ಥಿಕ ನೆರವು: ಛತ್ತೀಸ್ ಗಡ ಸಿಎಂ ಸಾಯ್
ಪತ್ರಕರ್ತ ಮುಕೇಶ ಚಂದ್ರಾಕರ | PC : NDTV
ರಾಯಪುರ: ಛತ್ತೀಸ್ಗಡ ಮುಖ್ಯಮಂತ್ರಿ ವಿಷ್ಣುದೇವ ಸಾಯ್ ಅವರು ಈ ತಿಂಗಳ ಆರಂಭದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಕೊಲೆಯಾದ ಪತ್ರಕರ್ತ ಮುಕೇಶ ಚಂದ್ರಾಕರ ಕುಟುಂಬಕ್ಕೆ 10 ಲಕ್ಷ ರೂ.ಗಳ ಆರ್ಥಿಕ ನೆರವನ್ನು ಪ್ರಕಟಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಾಯ್, ಪತ್ರಕರ್ತರಿಗಾಗಿ ಕಟ್ಟಡವೊಂದನ್ನು ನಿರ್ಮಿಲಾಗುವುದು ಮತ್ತು ಅದಕ್ಕೆ ಚಂದ್ರಾಕರ ಹೆಸರನ್ನಿಡಲಾಗುವುದು ಎಂದು ತಿಳಿಸಿದರು.
ಫ್ರೀಲಾನ್ಸ್ ಪತ್ರಕರ್ತ ಚಂದ್ರಾಕರ(33) ಜ.1ರಂದು ನಾಪತ್ತೆಯಾಗಿದ್ದು,ಎರಡು ದಿನಗಳ ಬಳಿಕ ಬಿಜಾಪುರದ ಛತ್ತನಪಾರಾ ಬಸ್ತಿ ಪ್ರದೇಶದಲ್ಲಿ ರಸ್ತೆ ಗುತ್ತಿಗೆದಾರ ಸುರೇಶ ಚಂದ್ರಾಕರಗೆ ಸೇರಿದ ಆವರಣದಲ್ಲಿಯ ಸೆಪ್ಟಿಕ್ ಟ್ಯಾಂಕ್ನಲ್ಲಿ ಅವರ ಶವ ಪತ್ತೆಯಾಗಿತ್ತು. ಜ.5ರಂದು ಪ್ರಮುಖ ಆರೋಪಿ ಸುರೇಶ ಚಂದ್ರಾಕರ ಹೈದರಾಬಾದ್ನಲ್ಲಿ ಪೋಲಿಸರ ಬಲೆಗೆ ಬಿದ್ದಿದ್ದ. ಅದಕ್ಕೂ ಮುನ್ನ ಆತನ ಸೋದರರಾದ ರಿತೇಶ ಮತ್ತು ದಿನೇಶ ಹಾಗೂ ಸುಪರವೈಸರ್ ಮಹೇಂದ್ರ ರಾಮಟೇಕೆಯನ್ನು ಪೋಲಿಸರು ಬಂಧಿಸಿದ್ದರು.
ಬಿಜಾಪುರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಭ್ರಷ್ಟಾಚಾರವನ್ನು ಆರೋಪಿಸಿ ಚಂದ್ರಾಕರ ತನ್ನ ‘ಬಸ್ತಾರ್ ಜಂಕ್ಷನ್’ ಯೂಟ್ಯೂಬ್ ಚಾನೆಲ್ನಲ್ಲಿ ಸುದ್ದಿ ವರದಿಯನ್ನು ಪ್ರಕಟಿಸಿದ್ದರು.ಇದು ಚಂದ್ರಾಕರ ಸಂಬಂಧಿ ಹಾಗೂ ಕಾಮಗಾರಿಯ ಗುತ್ತಿಗದಾರ ಸುರೇಶ ಚಂದ್ರಾಕರನನ್ನು ಕೆರಳಿಸಿತ್ತು ಎನ್ನುವುದು ಪೋಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
2021ರಲ್ಲಿ ಬಿಜಾಪುರದ ತಕಲಗುಡಾ ಎಂಬಲ್ಲಿ ಹೊಂಚುದಾಳಿ ನಡೆಸಿದ್ದ ನಕ್ಸಲರು ಸೆರೆ ಹಿಡಿದಿದ್ದ ಕೋಬ್ರಾ ಕಮಾಂಡೋ ರಾಕೇಶ್ವರ ಸಿಂಗ್ ಮನ್ಹಾಸ್ ಬಿಡುಗಡೆಯಲ್ಲಿ ಚಂದ್ರಾಕರ ಪ್ರಮುಖ ಪಾತ್ರವನ್ನು ವಹಿಸಿದ್ದರು. ಹೊಂಚುದಾಳಿಯಲ್ಲಿ 22 ಭದ್ರತಾ ಸಿಬ್ಬಂದಿಗಳು ಕೊಲ್ಲಲ್ಲಟ್ಟಿದ್ದರು.
ಸುರೇಶ ಚಂದ್ರಾಕರ ಕಾಂಗ್ರೆಸ್ ನಾಯಕನಾಗಿದ್ದಾನೆ ಎಂದು ಛತ್ತಿಸ್ಗಡದ ಉಪಮುಖ್ಯಮಂತ್ರಿವಿಜಯ ಶರ್ಮಾ ಈ ಹಿಂದೆ ಹೇಳಿದ್ದರು. ಆದರೆ ಆತ ಇತ್ತೀಚಿಗೆ ಬಿಜೆಪಿಗೆ ಸೇರಿದ್ದ ಎಂದು ಪ್ರತಿಪಕ್ಷವು ಸ್ಪಷ್ಟಪಡಿಸಿತ್ತು.
ಘಟನೆಯ ಬಳಿಕ ಸುರೇಶ ಚಂದ್ರಾಕರನ ನೋಂದಣಿಯನ್ನು ಅಮಾನತುಗೊಳಿಸಿರುವ ರಾಜ್ಯ ಪಿಡಬ್ಲ್ಯುಡಿ ಆತನಿಗೆ ನೀಡಲಾಗಿದ್ದ ಗುತ್ತಿಗೆಗಳನ್ನು ರದ್ದುಗೊಳಿಸಿದೆ.