ಛತ್ತೀಸ್ಗಢ: ಮುಂಗಡ ಸಂಬಳ ಕೇಳಿದ್ದಕ್ಕಾಗಿ ಕಾರ್ಮಿಕರ ಉಗುರುಗಳನ್ನು ಕಿತ್ತ ಮಾಲೀಕ

ಸಾಂದರ್ಭಿಕ ಚಿತ್ರ | PC : PTI
ರಾಯ್ಪುರ: ಛತ್ತೀಸ್ಗಢದ ಕೊರ್ಬ ಜಿಲ್ಲೆಯ ಐಸ್ಕ್ರೀಮ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಕಾರ್ಮಿಕರಿಗೆ ಮಾಲೀಕ ಮತ್ತು ಅವನ ಒಬ್ಬ ಸಹಚರ ಅಮಾನುಷ ಚಿತ್ರಹಿಂಸೆ ನೀಡಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳ್ಳತನದ ಆರೋಪ ಹೊರಿಸಿ ಮಾಲೀಕ ಚೋಟು ಗುರ್ಜರ್ ಮತ್ತು ಅವನ ಸಹಚರನು ಕಾರ್ಮಿಕರಾದ ಅಭಿಷೇಕ್ ಭಾಂಬಿ ಮತ್ತು ವಿನೋದ್ ಭಾಂಬಿಯ ಉಗುರುಗಳನ್ನು ಕಿತ್ತು ಹಾಕಿದ್ದಾರೆ ಮತ್ತು ಅವರಿಗೆ ವಿದ್ಯುತ್ ಆಘಾತ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಭಿಷೇಕ್ ಮತ್ತು ವಿನೋದ್ ರಾಜಸ್ಥಾನದ ಭಿಲ್ವಾರ ಜಿಲ್ಲೆಯವರು. ಅವರು ಗುತ್ತಿಗೆ ಆಧಾರದಲ್ಲಿ ಛತ್ತೀಸ್ಗಢದ ಐಸ್ಕ್ರಿಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಎಪ್ರಿಲ್ 14ರಂದು ಇಬ್ಬರು ಕಾರ್ಮಿಕರ ವಿರುದ್ಧ ಕಳ್ಳತನ ಆರೋಪ ಹೊರಿಸಿದ ಗುರ್ಜರ್ ಮತ್ತು ಅವರ ಸಹಚರ ಮುಕೇಶ್ ಶರ್ಮಾ, ಅವರ ಬಟ್ಟೆಗಳನ್ನು ಬಿಚ್ಚಿದರು ಎನ್ನಲಾಗಿದೆ. ಬಳಿಕ ಅವರ ಉಗುರುಗಳನ್ನು ಅಮಾನುಷವಾಗಿ ಕಿತ್ತು ಹಾಕಿ ವಿದ್ಯುತ್ ಆಘಾತ ನೀಡಿದರು ಎಂದು ಪೊಲೀಸರು ತಿಳಿಸಿದರು. ಈ ಚಿತ್ರಹಿಂಸೆಯ ವೀಡಿಯೊ ವೈರಲ್ ಆಗಿದೆ.
ತಪ್ಪಿಸಿಕೊಂಡು ರಾಜಸ್ಥಾನಕ್ಕೆ ಹೋಗುವಲ್ಲಿ ಯಶಸ್ವಿಯಾದ ಕಾರ್ಮಿಕರು ಅಲ್ಲಿ ಪೊಲೀಸರಿಗೆ ದೂರು ನೀಡಿದರು. ಅಲ್ಲಿ ‘ಝೀರೊ’ ಎಫ್ಐಆರ್ ದಾಖಲಿಸಿದ ಬಳಿಕ, ಘಟನೆ ನಡೆದ ಕೊರ್ಬ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಶುಕ್ರವಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
‘‘ನನ್ನ ವಾಹನದ ಕಂತು ಕಟ್ಟುವುದಕ್ಕಾಗಿ 20,000 ರೂ. ಮುಂಗಡ ವೇತನವನ್ನು ಕೇಳಿದ್ದೆ. ಅದನ್ನು ಮಾಲೀಕ ನಿರಾಕರಿಸಿದರು. ಕೆಲಸ ಬಿಡುತ್ತೇನೆ ಎಂದು ನಾನು ಹೇಳಿದಾಗ ಮಾಲೀಕ ಮತ್ತು ಅವರ ಸಹಚರ ನನಗೆ ಮತ್ತು ವಿನೋದ್ಗೆ ಚಿತ್ರಹಿಂಸೆ ನೀಡಿದ್ದಾರೆ’’ ಎಂಬುದಾಗಿ ಘಟನೆಯ ಬಗ್ಗೆ ಓರ್ವ ಸಂತ್ರಸ್ತ ಅಭಿಷೇಕ್ ವಿವರಿಸಿದ್ದಾರೆ.