ಛತ್ತೀಸ್ಗಡ | ಐಇಡಿ ಸ್ಫೋಟ ; ಎಸ್ಟಿಎಫ್ ನ ಇಬ್ಬರು ಸಿಬ್ಬಂದಿ ಸಾವು
PC : PTI
ರಾಯಪುರ: ಸಂಘರ್ಷ ಪೀಡಿತ ಬಿಜಾಪುರ ಜಿಲ್ಲೆಯ ಟೆರ್ರೆಂನ ಮಂಡಿಮಾರ್ಕಾ ಅರಣ್ಯ ಪ್ರದೇಶದಲ್ಲಿ ಶಂಕಿತ ಮಾವೋವಾದಿಗಳು ನಡೆಸಿದ ಪ್ರಬಲ ಐಇಡಿ ಸ್ಫೋಟದಲ್ಲಿ ವಿಶೇಷ ಕಾರ್ಯ ಪಡೆ (ಎಸ್ಟಿಎಫ್)ಗೆ ಸೇರಿದ ಇಬ್ಬರು ಯೋಧರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಹಿರಿಯ ಮಾವೋವಾದಿ ನಾಯಕರು ಹಾಗೂ ಕಾರ್ಯಕರ್ತರ ಇರುವಿಕೆ ಕುರಿತ ಮಾಹಿತಿಯ ಆಧಾರದಲ್ಲಿ ಸಿಆರ್ಪಿಎಫ್, ಎಲೈಟ್ ಕೋಬ್ರಾ, ಛತ್ತೀಸ್ಗಡ ಶಸಸ್ತ್ರ ಪಡೆ (ಸಿಎಎಫ್), ಜಿಲ್ಲಾ ಮೀಸಲು ಗಾರ್ಡ್ (ಡಿಆರ್ಜಿ) ಹಾಗೂ ಎಸ್ಟಿಎಫ್ ಅನ್ನು ಒಳಗೊಂಡ ಭದ್ರತಾ ಪಡೆಗಳ ಜಂಟಿ ತಂಡ ಜುಲೈ 16ರಂದು ಬೇಹುಗಾರಿಕೆ ಆಧಾರಿತ ವಿಶೇಷ ಕಾರ್ಯಾಚರಣೆ ಆರಂಭಿಸಿತು. ಶೋಧ ಕಾರ್ಯಾಚರಣೆ ನಡೆಸಿ ಹಿಂದಿರುಗುವ ಸಂದರ್ಭ ಮಾವೋವಾದಿಗಳು ಇರಿಸಿದ್ದ ಐಇಡಿ ಸ್ಫೋಟಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಘರ್ಷ ಪೀಡಿತ ದರ್ಭಾ ವಿಭಾಗ, ಪಶ್ಚಿಮ ಬಸ್ತಾರ್ ವಿಭಾಗದಲ್ಲಿ ಹಾಗೂ ಬಸ್ತಾರ್ ವಲಯದ ಬಿಜಾಪುರ-ದಾಂತೆವಾಡ-ಸುಕ್ಮಾ ಅಂತರ್ ಜಿಲ್ಲಾ ಗಡಿ ಪ್ರದೇಶಗಳಲ್ಲಿ ನಿಷೇಧಿತ ಮಾವೋವಾದಿ ಸಂಘಟನೆ ಪಿಎಲ್ಜಿಎ ಮಿಲಿಟರಿ ಕಂಪೆನಿ ನಂ.2ಕ್ಕೆ ಸೇರಿದ ಬಂಡುಕೋರರ ಚಲನವಲನದ ಕುರಿತ ಖಚಿತ ಮಾಹಿತಿ ಸ್ವೀಕರಿಸಲಾಗಿತ್ತು.
ಮೃತಪಟ್ಟ ಎಸ್ಟಿಎಫ್ ಯೋಧರನ್ನು ರಾಯಪುರದ ನಿವಾಸಿ ಕಾನ್ಸ್ಟೆಬಲ್ ಭರತ್ ಲಾಲ್ ಸಾಹು ಹಾಗೂ ನಾರಾಯಣಪುರದ ನಿವಾಸಿ ಕಾನ್ಸ್ಟೆಬಲ್ ಸತ್ಯೇರ್ ಸಿಂಗ್ ಕಾಂಗೆ ಎಂದು ಗುರುತಿಸಲಾಗಿದೆ.
ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭದ್ರತಾ ಪಡೆ ಧಾವಿಸಿದೆ ಹಾಗೂ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದೆ.
ಪ್ರತಿಕೂಲ ಹವಾಮಾನದ ಕಾರಣಕ್ಕಾಗಿ ಗಾಯಗೊಂಡ ಪುರುಷೋತ್ತಮ ನಾಗ್, ಕೋಮಲ್ ಯಾದವ್, ಸಿಯಾರಾಮ್ ಸೋರಿ, ಹಾಗೂ ಸಂಜಯ್ ಕುಮಾರ್ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ಹೆಲಿಕಾಪ್ಟರ್ ಮೂಲಕ ರಾಯಪುರಕ್ಕೆ ಏರ್ ಲಿಫ್ಟ್ ಮಾಡಲು ಸಾಧ್ಯವಾಗಲಿಲ್ಲ. ಆದುದರಿಂದ ಅವರನ್ನು ಈಗ ಬಿಜಾಪುರದಿಂದ ಜಗದಲ್ಪುರ (ಬಸ್ತಾರ್ನ ಜಿಲ್ಲಾ ಕೇಂದ್ರ ಕಚೇರಿ) ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರಸ್ತೆ ಮೂಲಕ ಸ್ಥಳಾಂತರಿಸಲಾಗಿದೆ.