ಛತ್ತೀಸ್ಗಢ : ಗುಂಡಿನ ಕಾಳಗದಲ್ಲಿ ನಕ್ಸಲೀಯ ಸಾವು
ಸಾಂದರ್ಭಿಕ ಚಿತ್ರ.
ರಾಯಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಶಂಕಿತ ನಕ್ಸಲ್ ಹತ್ಯೆಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವಿವಿಧ ಭದ್ರತಾ ಪಡೆಗಳ ಸಿಬ್ಬಂದಿಯ ಜಂಟಿ ತಂಡ ಮಡ್ಡೇಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂದೇಪಾರಾ ಗ್ರಾಮದ ಸಮೀಪದ ಅರಣ್ಯದಲ್ಲಿ ಬೆಳಗ್ಗೆ ಸುಮಾರು 6 ಗಂಟೆಗೆ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಗುಂಡಿನ ನಕ್ಸಲೀಯರೊಂದಿಗೆ ನಡೆಯಿತು ಎಂದು ಐಜಿಪಿ (ಬಸ್ತಾರ್ ವಲಯ) ಸುಂದರ್ ರಾಜ್ ಪಿ. ಹೇಳಿದ್ದಾರೆ.
ರಾಜ್ಯ ಪೊಲೀಸ್ನ ಘಟಕಗಳಾದ ಜಿಲ್ಲಾ ರಿಸರ್ವ್ ಗಾರ್ಡ್, ಬಸ್ತಾರ್ ಫೈಟರ್, ವಿಶೇಷ ಕಾರ್ಯ ಪಡೆ ಹಾಗೂ ಸಿಆರ್ಪಿಎಫ್ನ 170ನೇ ಬೆಟಾಲಿಯನ್ಗೆ ಸೇರಿದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು.
ಕೊರಾಂಜೆಡ್-ಬಂದೇಪಾರ ಅರಣ್ಯದಲ್ಲಿ ಮಾವೋವಾದಿ ಮಡ್ಡೆಡ್ ಪ್ರದೇಶ ಸಮಿತಿಯ ಉಸ್ತುವಾರಿ ನಾಗೇಶ್, ಅದರ ಕಾರ್ಯದರ್ಶಿ ಬುಚನ್ನಾ, ಸದಸ್ಯ ವಿಶ್ವನಾಥ್ ಹಾಗೂ 15ರಿಂದ 20 ಮಂದಿ ಶಸಸ್ತ್ರ ಕಾರ್ಯಕರ್ತರೊಂದಿಗೆ ಹಿರಿಯ ನಕ್ಸಲೀಯ ಇರುವ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಂಡಿನ ಚಕಮಕಿ ಅಂತ್ಯಗೊಂಡ ಬಳಿಕ ಸ್ಥಳದಲ್ಲಿ ಓರ್ವ ನಕ್ಸಲೀಯನ ಮೃತದೇಹ ಹಾಗೂ ಎ.ಕೆ. 47 ರೈಫಲ್ ಪತ್ತೆಯಾಯಿತು. ಮೃತ ನಕ್ಸಲೀಯನನ್ನು ಇನ್ನಷ್ಟೇ ಗುರುತು ಪತ್ತೆ ಹಚ್ಚಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.