ಛತ್ತೀಸ್ ಗಡ : ಎನ್ಕೌಂಟರ್ ನಲ್ಲಿ ಒಂಭತ್ತು ಮಾವೋವಾದಿಗಳ ಹತ್ಯೆ
Photo: PTI
ರಾಯಪುರ : ಲೋಕಸಭಾ ಚುನಾವಣೆಗಳಿಗೆ ಮುನ್ನ ಮಂಗಳವಾರ ಪ್ರಮುಖ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಛತ್ತೀಸ್ ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳೊಂದಿಗೆ ಗುಂಡಿನ ಕಾಳಗದಲ್ಲಿ ಒಂಭತ್ತು ಮಾವೋವಾದಿಗಳು ಕೊಲ್ಲಲ್ಪಟ್ಟಿದ್ದಾರೆ. ಬಸ್ತಾರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬಿಜಾಪುರ ಜಿಲ್ಲೆಯಲ್ಲಿ ಎ.19ರಂದು ಮತದಾನ ನಡೆಯಲಿದೆ.
ಗುಂಡಿನ ಕಾಳಗ ನಿಂತ ಬಳಿಕ ಸ್ಥಳದಲ್ಲಿ ನಾಲ್ವರು ನಕ್ಸಲರ ಮೃತದೇಹಗಳು,ಲಘು ಮಷಿನ್ ಗನ್,ಬ್ಯಾರೆಲ್ ಗ್ರೆನೇಡ್ ಲಾಂಚರ್ಗಳು ,ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ. ಬಳಿಕ ಸ್ಥಳದಲ್ಲಿ ಇನ್ನೂ ಐವರು ನಕ್ಸಲರ ಮೃತದೇಹಗಳು ಪತ್ತೆಯಾಗಿದ್ದು, ಪ್ರದೇಶದಲ್ಲಿ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ಬಸ್ತಾರ್ ವಲಯ ಐಜಿಪಿ ಸುಂದರರಾಜ್ ಪಿ. ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಗಳ ಜಂಟಿ ತಂಡವು ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ತೆರಳುತ್ತಿದ್ದಾಗ ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ಗಂಗಲೂರ್ ಪೋಲಿಸ್ ಠಾಣಾ ವ್ಯಾಪ್ತಿಯ ಲೆಂಡ್ರಾ ಗ್ರಾಮದ ಸಮೀಪ ಅರಣ್ಯದಲ್ಲಿ ಗುಂಡಿನ ಕಾಳಗ ನಡೆದಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮೀಸಲು ಪೋಲಿಸ್ ದಳ, ವಿಶೇಷ ಕಾರ್ಯಪಡೆ, ಸಿಆರ್ಪಿಎಫ್ ಮತ್ತು ಅದರ ಕೋಬ್ರಾ ಘಟಕದ ಸಿಬ್ಬಂದಿಗಳು ಜಂಟಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿವರ್ಷ ಬೇಸಿಗೆಯಲ್ಲಿ ನಕ್ಸಲರು ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಲು ಟ್ಯಾಕ್ಟಿಕಲ್ ಕೌಂಟರ್ ಅಫೆನ್ಸಿವ್ ಕ್ಯಾಂಪೇನ್ (ಟಿಸಿಒಸಿ) ನಡೆಸುತ್ತಾರೆ. ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಹೆಚ್ಚಿನ ದಾಳಿಗಳು ಇದೇ ಅವಧಿಯಲ್ಲಿ ನಡೆದಿವೆ.
ಮಾ.27ರಂದು ಬಿಜಾಪುರದ ಬಾಸಗುಡಾ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿಯಲ್ಲಿ ಆರು ನಕ್ಸಲರು ಕೊಲ್ಲಲ್ಪಟ್ಟಿದ್ದರು.
ಮಂಗಳವಾರದ ಘಟನೆಯೊಂದಿಗೆ ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ ಈ ವರ್ಷ ಭದ್ರತಾ ಪಡೆಗಳೊಂದಿಗೆ ಪ್ರತ್ಯೇಕ ಗುಂಡಿನ ಕಾಳಗಗಳಲ್ಲಿ ಕೊಲ್ಲಲ್ಪಟ್ಟಿರುವ ಮಾವೋವಾದಿಗಳ ಸಂಖ್ಯೆ 41ಕ್ಕೇರಿದೆ.