ಛತ್ತೀಸ್ಗಢ : ಅಬಕಾರಿ ಹಗರಣದಲ್ಲಿ ಈಡಿಯಿಂದ ನಿವೃತ್ತ ಐಎಎಸ್ ಅಧಿಕಾರಿಯ ಬಂಧನ
ಸಾಂದರ್ಭಿಕ ಚಿತ್ರ | PC : PTI
ರಾಯಪುರ : ಛತ್ತೀಸ್ಗಢದ 2,000 ಕೋ.ರೂ. ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಛತ್ತೀಸ್ಗಢದ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಟುಟೇಜಾ ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ 2003ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಅನಿಲ್ ಟುಟೇಜಾ ಅವರನ್ನು ರಾಯಪುರದಲ್ಲಿರುವ ಆರ್ಥಿಕ ಅಪರಾಧಗಳ ದಳ (ಇಒಡಬ್ಲ್ಯು)/ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಕಚೇರಿಯಿಂದ ಶನಿವಾರ ಸಂಜೆ ವಶಕ್ಕೆ ತೆಗೆದುಕೊಂಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆಗಳನ್ನು ದಾಖಲಿಸಲು ಅನಿಲ್ ಟುಟೇಜಾ ಹಾಗೂ ಅವರ ಪುತ್ರ ಯಶ್ ಟುಟೇಜಾ ಇಲ್ಲಿಗೆ ಆಗಮಿಸಿದ್ದರು.
ಅನಂತರ ಅನಿಲ್ ಟುಟೇಜಾ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ನಿಯಮಗಳ ಅಡಿಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯ ದೂರಿನ ಆಧಾರದ ತನ್ನ ಈ ಹಿಂದಿನ ಪ್ರಥಮ ಮಾಹಿತಿ ವರದಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದ ಬಳಿಕ ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಹೊಸ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.
ಎಫ್ಐಆರ್ ದಾಖಲಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಪ್ರಕರಣದ ಕುರಿತ ತನ್ನ ತನಿಖೆಯ ವಿವರಗಳನ್ನು ರಾಜ್ಯ ಇಒಡಬ್ಲು/ಎಸಿಬಿಯೊಂದಿಗೆ ಹಂಚಿಕೊಂಡಿದೆ. ಅವರು ಎಫ್ಐಆರ್ ದಾಖಲಿಸಿದ ಬಳಿಕ ಜಾರಿ ನಿರ್ದೇಶನಾಲಯ ದೂರನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಹೊಸ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.
ಛತ್ತೀಸ್ಗಢದಲ್ಲಿ ಮಾರಾಟವಾದ ಪ್ರತಿ ಬಾಟಲಿ ಮದ್ಯದಿಂದ ಕಾನೂನುಬಾಹಿರವಾಗಿ ಹಣ ಸಂಗ್ರಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.