ಛತ್ತೀಸ್ ಗಢ | 6 ಮಂದಿ ನಕ್ಸಲರು ಶರಣಾಗತ
Photo : ETV Bharat - ಸಾಂದರ್ಭಿಕ ಚಿತ್ರ
ಸುಕ್ಮಾ : ಆರು ಮಂದಿ ನಕ್ಸಲರು ಗುರುವಾರ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಶರಣಾಗತರಾಗಿದ್ದಾರೆ. ಇವರ ತಲೆಗಳಿಗೆ ಒಟ್ಟು 36 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರಣಾಗತರಾದ ಆರು ಮಂದಿಯನ್ನು ದುಧಿ ಪೊಜ್ಜ ಹಾಗೂ ಆತನ ಪತ್ನಿ ದುಧಿ ಪೊಜ್ಜೆ, ಆಯಟೆ ಕೊರ್ಸಾ ಆಲಿಯಾಸ್ ಜಯಕ್ಕ, ಕವಾಸಿ ಮುಡಾ, ಕರಮ್ ನರಣ್ಣ ಆಲಿಯಾಸ್ ಭೂಮಾ, ಮಡ್ಕಂ ಸುಕ್ಕಾ ಆಲಿಯಾಸ್ ರೈನು ಎಂದು ಸುಕ್ಮಾ ಪೊಲೀಸ್ ಅಧೀಕ್ಷಕ ಕಿರಣ್ ಚವ್ಹಾಣ್ ಗುರುತಿಸಿದ್ದಾರೆ.
ಮಾವೋಯಿಸ್ಟ್ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್ಜಿಎ) ಬೆಟಾಲಿಯನ್ ನಂಬರ್ 1ನ ಭಾಗವಾಗಿದ್ದ ಹಾಗೂ ಪೀಪಲ್ಸ್ ಪಾರ್ಟಿ ಕಮಿಟಿ ಸದಸ್ಯ (ಪಿಪಿಸಿಎಂ)ರಾಗಿದ್ದ ಪೊಜ್ಜ ತಲೆಗೆ 8 ಲಕ್ಷ ರೂ. ಬಹುಮಾನ ಹಾಗೂ ಅವರ ಪತ್ನಿ ಪೊಜ್ಜೆ ತಲೆಗೆ ಕೂಡ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಕಿಸ್ತಾರಾಮ್ ಪ್ರದೇಶ ಸಮಿತಿಯ ಕಮಾಂಡರ್ ಹಾಗೂ ಏರಿಯಾ ಕಮಿಟಿ ಸದಸ್ಯೆ (ಎಸಿಎಂ) ಜಯಕ್ಕನ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಮುಡಾ, ಭೂಮಾ ಹಾಗೂ ಮಡ್ಕಂ ತಲೆಗೆ ಒಟ್ಟು 15 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ನಕ್ಸಲರಿಗೆ ಪುನರ್ವಸತಿ ಕಲ್ಪಿಸುವ ಜಿಲ್ಲಾ ಪೊಲೀಸರ ‘‘ಪುನಾ ನಾರ್ಕೋಮ್’’ (ಸ್ಥಳೀಯ ಗೋಂಡಿ ಭಾಷೆಯಲ್ಲಿ ‘ಹೊಸ ಉದಯ’)ಯೋಜನೆಯಿಂದ ಪ್ರೇರಣೆಗೊಂಡ ಬಳಿಕ ಈ 6 ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ರಾಜ್ಯ ಸರಕಾರದ ಶರಣಾಗತಿ ಹಾಗೂ ಪುನರ್ವಸತಿ ನೀತಿಯಡಿ ಅವರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಚವಾಣ್ ತಿಳಿಸಿದ್ದಾರೆ.