ಒಡಿಶಾದ ಎಲ್ಲ ಜಿಲ್ಲೆಗಳನ್ನು ಹೆಸರಿಸುವಂತೆ ಪ್ರಧಾನಿ ಮೋದಿ ಸವಾಲಿಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿರುಗೇಟು
ನರೇಂದ್ರ ಮೋದಿ, ನವೀನ್ ಪಟ್ನಾಯಕ್ | PC : PTI
ಭುವನೇಶ್ವರ : ಶನಿವಾರ ರಾಜ್ಯದಲ್ಲಿ ಚುನಾವಣಾ ರ್ಯಾಲಿಯಲ್ಲಿ ತನ್ನ ವಿರುದ್ಧ ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ನಿಜಕ್ಕೂ ಪ್ರಧಾನಿಗೆ ಒಡಿಶಾ ಮರೆತೇಹೋಗಿದೆ ಎಂದಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಪಟ್ನಾಯಕ್, ಶಾಸ್ತ್ರೀಯ ಒಡಿಸ್ಸಿ ಸಂಗೀತಕ್ಕೆ ಮಾನ್ಯತೆ ನೀಡುವ ಕುರಿತು ತಾನು ಎರಡು ಸಲ ಪ್ರಸ್ತಾವಗಳನ್ನು ಕಳುಹಿಸಿದ್ದೆ, ಆದರೆ ಅವುಗಳನ್ನು ಪ್ರಧಾನಿ ಕಚೇರಿಯು ತಿರಸ್ಕರಿಸಿತ್ತು ಎನ್ನುವುದನ್ನು ನೆನಪಿಸಿದ್ದಾರೆ.
‘ಗೌರವಾನ್ವಿತ ಪ್ರಧಾನಿಗಳೇ, ಒಡಿಶಾ ಬಗ್ಗೆ ನಿಮಗೆ ಎಷ್ಟು ನೆನಪಿದೆ? ಒಡಿಯಾ ಶಾಸ್ತ್ರೀಯ ಭಾಷೆಯಾಗಿದ್ದರೂ ನೀವು ಅದನ್ನು ಮರೆತುಬಿಟ್ಟಿದ್ದೀರಿ. ನೀವು ಸಂಸ್ಕೃತಕ್ಕೆ 1000 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಿದ್ದೀರಿ. ಆದರೆ ಒಡಿಯಾಕ್ಕೆ ಶೂನ್ಯವನ್ನು ನೀಡಿದ್ದೀರಿ ’ಎಂದು ಪಟ್ನಾಯಕ್ ತನ್ನ ವೀಡಿಯೊ ಪೋಸ್ಟ್ನಲ್ಲಿ ಹೇಳಿದ್ದಾರೆ.
ಒಡಿಶಾದ ನೈಸರ್ಗಿಕ ಸಂಪನ್ಮೂಲಗಳ ಕುರಿತು ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಕಲ್ಲಿದ್ದಲು ಒಡಿಶಾದ ನೈಸರ್ಗಿಕ ಸಂಪತ್ತು. ನೀವು (ಕೇಂದ್ರ) ಒಡಿಶಾದಿಂದ ಕಲ್ಲಿದ್ದಲು ಪಡೆಯುತ್ತೀರಿ, ಆದರೆ ಕಳೆದ 10 ವರ್ಷಗಳಲ್ಲಿ ಕಲ್ಲಿದ್ದಲಿನ ಮೇಲೆ ರಾಯಧನವನ್ನು ಹೆಚ್ಚಿಸಲು ಮರೆತುಬಿಟ್ಟಿದ್ದೀರಿ ಎಂದು ಕುಟುಕಿದ್ದಾರೆ.
ಇತ್ತೀಚಿಗೆ ಭಾರತ ರತ್ನ ಪ್ರಶಸ್ತಿಗಳನ್ನು ನೀಡಿದಾಗ ಒಡಿಶಾದ ವೀರ ಪುತ್ರರನ್ನು ಮರೆತಿದ್ದು ಏಕೆ ಎಂದೂ ಪಟ್ನಾಯಕ್ ಮೋದಿ ಸರಕಾರವನ್ನು ಪ್ರಶ್ನಿಸಿದ್ದಾರೆ.
ಒಡಿಶಾಶ ಬೆರ್ಹಾಮ್ಪುರದಲ್ಲಿ ರ್ಯಾಲಿಯಲ್ಲಿ ಮೋದಿ, ಬಿಜೆಪಿ ಅಭಿವೃದ್ಧಿ ಮತ್ತು ಪರಂಪರೆಯಲ್ಲಿ ನಂಬಿಕೆಯನ್ನು ಹೊಂದಿದೆ. ಒಡಿಶಾದಲ್ಲಿ ಒಡಿಯಾ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ರಾಜ್ಯ ಬಿಜೆಪಿಯು ಬದ್ಧವಾಗಿದೆ. ಬಿಜೆಪಿಯು ಒಡಿಶಾದ ಸಂಸ್ಕೃತಿಯನ್ನು ಆಳವಾಗಿ ಮೈಗೂಡಿಸಿಕೊಂಡಿರುವ ರಾಜ್ಯದ ಯಾವುದೇ ಪುತ್ರ ಅಥವಾ ಪುತ್ರಿಯನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಿದೆ ಎಂದು ಹೇಳಿದ್ದರು.
ಸುದೀರ್ಘ ಕಾಲ ಒಡಿಶಾದ ಮುಖ್ಯಮಂತ್ರಿಯಾಗಿರುವ ಪಟ್ನಾಯಕ್ ಕಾಗದವನ್ನು ನೋಡದೆ ರಾಜ್ಯದ ಜಿಲ್ಲೆಗಳು ಮತ್ತು ಅವುಗಳ ರಾಜಧಾನಿಗಳನ್ನು ಹೆಸರಿಸುವಂತೆ ಸವಾಲು ಹಾಕಿದ್ದ ಮೋದಿ, ಅವರು ರಾಜ್ಯದ ಜಿಲ್ಲೆಗಳನ್ನು ಹೆಸರಿಸಲಾಗದಿದ್ದರೆ ನಿಮ್ಮ ನೋವನ್ನು ಹೇಗೆ ತಿಳಿದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದರು. ಈ ವೇಳೆ, ಜಿಲ್ಲೆಗಳು ರಾಜಧಾನಿಗಳನ್ನು ಹೊಂದಿರುವುದಿಲ್ಲ ಎನ್ನುವುದನ್ನು ಮೋದಿ ಮರೆತಿದ್ದರು.
ಒಡಿಶಾದಲ್ಲಿ ಮೇ 13ರಿಂದ ಜೂ.1ರವರೆಗೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ.