ಮುಖ್ಯಮಂತ್ರಿಗಳ ಬುಲ್ಡೋಜರ್ ದಲಿತರು, ಹಿಂದುಳಿದ ವರ್ಗಗಳ ಮೀಸಲಾತಿಗಳಿಗೆ ವಿರುದ್ಧವಾಗಿದೆ: ಪ್ರಧಾನಿ ಮೋದಿಗೆ ಕಾಂಗ್ರೆಸ್ ತಿರುಗೇಟು
ನರೇಂದ್ರ ಮೋದಿ , ಜೈರಾಂ ರಮೇಶ್ | PC : PTI
ಹೊಸದಿಲ್ಲಿ: ‘ಎಲ್ಲಿ ಬುಲ್ಡೋಜರ್ ಓಡಿಸಬೇಕು ಎನ್ನುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ರಿಂದ ಕಲಿಯಿರಿ’ ಎಂಬ ಹೇಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಮುಖ್ಯಮಂತ್ರಿಗಳ ಬುಲ್ಡೋಜರ್ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ತನ್ನ ಎಕ್ಸ್ ಪೋಸ್ಟ್ ನಲ್ಲಿ ಆದಿತ್ಯನಾಥ್ ಅವರ ವೆಬ್ಸೈಟ್ ನಿಂದ ಲೇಖನವೊಂದನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು,ಅದು ಆರೆಸ್ಸೆಸ್ ನ ಮೀಸಲಾತಿ ವಿರೋಧಿ ಮನಃಸ್ಥಿತಿಯನ್ನು ಪ್ರತಿಬಿಂಬಿಸಿದೆ ಎಂದು ಹೇಳಿದ್ದಾರೆ.
‘ಎಲ್ಲಿ ಬುಲ್ಡೋಜರ್ ಓಡಿಸಬೇಕು ಎನ್ನುವುದನ್ನು ಇಂಡಿಯಾ ಮೈತ್ರಿಕೂಟವು ಯೋಗಿ ಆದಿತ್ಯನಾಥರಿಂದ ಕಲಿಯಬೇಕು ಎಂದು ನಿರ್ಗಮಿಸುತ್ತಿರುವ ಪ್ರಧಾನಿ ಹೇಳಿದ್ದಾರೆ. ಯೋಗಿಯವರ ಬುಲ್ಡೋಜರ್ ಹೇಗೆ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ವ್ಯವಸ್ಥೆಗೆ ವಿರುದ್ಧವಾಗಿದೆ ನೋಡಿ’ ಎಂದು ಹೇಳಿರುವ ರಮೇಶ, ಮೀಸಲಾತಿ ಕುರಿತು ಯೋಗಿಯವರ ದೃಷ್ಟಿಕೋನದಿಂದಾಗಿ ತಾನು ಅವರನ್ನು ಬೆಂಬಲಿಸುತ್ತಿದ್ದೇನೆ ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಬೇಕು. ಇದು ಅವರ ‘400 ಪಾರ್’ಘೋಷಣೆಯ ಹಿಂದಿನ ಗುಟ್ಟು. ಅವರು ಇದನ್ನು ಬಯಸುತ್ತಿದ್ದಾರೆ,ಏಕೆಂದರೆ ಸಂಸತ್ತಿನಲ್ಲಿ 400 ಸ್ಥಾನಗಳ ಬಹುಮತದೊಂದಿಗೆ ಅವರು ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನವನ್ನು ತಿದ್ದುಪಡಿ ಮಾಡಿ ದಲಿತರು,ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಹಕ್ಕನ್ನು ಕಿತ್ತುಕೊಳ್ಳಬಹುದು ಎಂದು ಆರೋಪಿಸಿದ್ದಾರೆ.
ಅಂಬೇಡ್ಕರ್ ಅವರ ಸಂವಿಧಾನವನ್ನು ಅಂತ್ಯಗೊಳಿಸುವ ಮತ್ತು ‘ಮನುವಾದಿ ಚಿಂತನೆ ’ ಆಧಾರಿತ ಹೊಸ ಸಂವಿಧಾನವನ್ನು ರಚಿಸುವ ಆರೆಸ್ಸೆಸ್ ನ ದಶಕಗಳ ಹಿಂದಿನ ಸಂಚನ್ನು ಕಾರ್ಯಗತಗೊಳಿಸಲು ಬಿಜೆಪಿ ಬಯಸಿದೆ ಎಂದು ರಮೇಶ್ ಹೇಳಿದ್ದಾರೆ.
ವೀಡಿಯೊವೊಂದರಲ್ಲಿ ಸದ್ರಿ ಲೇಖನವು ಆದಿತ್ಯನಾಥರ ವೆಬ್ಸೈಟ್ ನಲ್ಲಿ ಎಲ್ಲಿದೆ ಎಂದು ತೋರಿಸಿರುವ ರಮೇಶ, ಅದು ಇನ್ನು ಮುಂದೆ ಲಭ್ಯವಾಗದಿರಬಹುದು ಎಂದಿದ್ದಾರೆ. ಮೀಸಲಾತಿ ವಿರೋಧಿ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ತಾನು ಪ್ರತಿಪಾದಿಸಿರುವ ಲೇಖನದ ಭಾಗಗಳನ್ನೂ ಅವರು ಉಲ್ಲೇಖಿಸಿದ್ದಾರೆ.
ಇದಕ್ಕೂ ಮುನ್ನ,ಶುಕ್ರವಾರ ಬೆಳಿಗ್ಗೆ ಬಾರಾಬಂಕಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ,ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಓಡಿಸುತ್ತಾರೆ ಎಂದು ಹೇಳಿದ್ದರು. ಬುಲ್ಡೋಜರ್ಗಳನ್ನು ಎಲ್ಲಿ ಓಡಿಸಬೇಕು ಎಂಬ ಬಗ್ಗೆ ಆದಿತ್ಯನಾಥರಿಂದ ಕಲಿತುಕೊಳ್ಳುವಂತೆ ಅವುಗಳಿಗೆ ಸೂಚಿಸಿದ್ದರು.
‘ಅಸ್ಥಿರತೆ’ಯನ್ನು ಸೃಷ್ಟಿಸಲು ಇಂಡಿಯಾ ಮೈತ್ರಿಕೂಟವು ಕಣದಲ್ಲಿದೆ ಮತ್ತು ಚುನಾವಣೆ ಪ್ರಗತಿಯಲ್ಲಿರುವಂತೆ ಅದು ಇಸ್ಪೀಟೆಲೆಗಳ ಸೌಧದಂತೆ ಕುಸಿಯುತ್ತಿದೆ ಎಂದೂ ಮೋದಿ ಹೇಳಿದ್ದರು.