ಬಾಲ್ಯ ವಿವಾಹ ನಿಷೇಧ ಕಾಯ್ದೆ | ಧರ್ಮಾತೀತವಾಗಿ ಎಲ್ಲ ನಾಗರಿಕರಿಗೂ ಅನ್ವಯವಾಗುತ್ತದೆ : ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್
ಕೊಚ್ಚಿ: ಪ್ರತಿಯೊಬ್ಬ ಭಾರತೀಯರು ಮೊದಲು ಭಾರತದ ನಾಗರಿಕರಾಗಿದ್ದು, ನಂತರ ಮಾತ್ರ ಅವರವರ ಧರ್ಮದ ಸದಸ್ಯರಾಗುವುದರಿಂದ, ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಎಲ್ಲ ಭಾರತೀಯ ನಾಗರಿಕರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
2012ರಲ್ಲಿ ಪಾಲಕ್ಕಾಡ್ ನಲ್ಲಿ ಬಾಲ್ಯ ವಿವಾಹದ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿಯ ಕುರಿತು ಇತ್ತೀಚಿಗೆ ತೀರ್ಪು ನೀಡಿರುವ ನ್ಯಾ. ಪಿ.ವಿ.ಕುನ್ಹಿಕೃಷ್ಣನ್, ಯಾವುದೇ ವ್ಯಕ್ತಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಇತ್ಯಾದಿ ಧರ್ಮಗಳಿಗೆ ಸೇರಿದ್ದರೂ ಈ ಕಾಯ್ದೆ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಸ್ಲಿಂ ಸಮುದಾಯದ ಬಾಲಕಿಯು ಮೈನೆರೆದ ನಂತರ, ಅರ್ಥಾತ್ 15 ವರ್ಷಗಳ ನಂತರ ವಿವಾಹವಾಗುವ ಧಾರ್ಮಿಕ ಹಕ್ಕನ್ನು ಹೊಂದಿದ್ದಾಳೆ ಎಂದು ಅಪ್ರಾಪ್ತ ಬಾಲಕಿಯ ತಂದೆ ಸೇರಿದಂತೆ ಅರ್ಜಿದಾರರು ನ್ಯಾಯಾಲಯದ ಮುಂದೆ ವಾದಿಸಿದ್ದರು.
“ಯಾವುದೇ ವ್ಯಕ್ತಿ ಮೊದಲಿಗೆ ಭಾರತದ ನಾಗರಿಕನಾಗಿರುತ್ತಾನೆ. ಆನಂತರವಷ್ಟೆ ಆತನ ಧರ್ಮ ಮುಂದೆ ಬರುತ್ತದೆ. ನಾಗರಿಕತ್ವ ಮೊದಲು ಹಾಗೂ ಧರ್ಮ ನಂತರ ಬರಬೇಕು. ಹೀಗಾಗಿ, ಧರ್ಮಾತೀತವಾಗಿ ಯಾವುದೇ ವ್ಯಕ್ತಿ ಹಿಂದೂ, ಮುಸ್ಲಿಂ, ಕ್ರಿಶ್ಚಿ ಯನ್, ಪಾರ್ಸಿ ಇನ್ನಿತರ ಯಾವುದೇ ಧರ್ಮಕ್ಕೆ ಸೇರಿದ್ದರೂ, ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಅನ್ವಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ” ಎಂದು ಜುಲೈ 15ರ ಆದೇಶದಲ್ಲಿ ನ್ಯಾ. ಕುನ್ಹಿಕೃಷ್ಣನ್ ಹೇಳಿದ್ದಾರೆ.
ಬಾಲ್ಯ ವಿವಾಹದಿಂದ ಮಕ್ಕಳ ಮೂಲಭೂತ ಮಾನವ ಹಕ್ಕುಗಳು ನಿರಾಕರಣೆಯಾಗುತ್ತವೆ ಹಾಗೂ ಬಾಲಕಿಯರು ಮಧ್ಯದಲ್ಲೇ ಶಾಲಾ ವಿದ್ಯಾಭ್ಯಾಸ ತೊರೆಯಬೇಕಾಗುತ್ತದೆ ಎಂಬ ಅಂಶಗಳನ್ನೂ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.