ಹವಾಮಾನ ಬದಲಾವಣೆಯಿಂದ 40 ಮಿಲಿಯನ್ ಮಕ್ಕಳು ಹಸಿವಿನಿಂದ ಬಳಲುವ ಸಾಧ್ಯತೆ; ವರದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಹವಾಮಾನ ಬದಲಾವಣೆಯಿಂದ 2050ರ ವೇಳೆಗೆ ಕನಿಷ್ಠ 40 ಮಿಲಿಯನ್ ಮಕ್ಕಳು ಹಸಿವಿನಿಂದ ಬಳಲಲಿದ್ದಾರೆ ಎಂದು ಮಂಗಳವಾರ ಬಿಡುಗಡೆಯಾದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ವರದಿಯು ತಿಳಿಸಿದೆ.
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ “ಎ ರೇಸ್ ಟು ನ್ಯೂರಿಶ್ ಎ ವಾರ್ಮಿಂಗ್ ವರ್ಲ್ಡ್” ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ ಜಾಗತಿಕವಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಹವಾಮಾನ ಬದಲಾವಣೆಯು 2024 ಮತ್ತು 2050ರ ನಡುವೆ ಹೆಚ್ಚುವರಿ 40 ಮಿಲಿಯನ್ ಮಕ್ಕಳನ್ನು ಹಸಿವಿನಿಂದ ಬಳಲುವಂತೆ ಮಾಡಿ ಅವರ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಿದೆ.
ಜಾಗತಿಕ ಹವಾಮಾನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡುವ ಮತ್ತು ಮಕ್ಕಳನ್ನು ಪೋಷಣೆ ಮಾಡುವ ದೃಷ್ಟಿಯಿಂದ ಜಾಗತಿಕ ಆರೋಗ್ಯ ನಿಧಿ ಹೆಚ್ಚಿಸುವಂತೆ ವಿಶ್ವ ನಾಯಕರಿಗೆ ವರದಿಯು ಒತ್ತಾಯಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ 2023ರಲ್ಲಿ 148 ಮಿಲಿಯನ್ ಮಕ್ಕಳ ಕುಂಠಿತ ಬೆಳವಣಿಗೆಯನ್ನು ಅಂದಾಜಿಸಿದೆ. ಮಕ್ಕಳು ಮಾನಸಿಕವಾಗಿ ಅಥವಾ ದೈಹಿಕವಾಗಿ ಪರಿಪೂರ್ಣ ಬೆಳವಣಿಗೆ ಹೊಂದಿರುವುದಿಲ್ಲ. ಮಕ್ಕಳು
ಕ್ಷೀಣವಾಗಿರುತ್ತಾರೆ ಮತ್ತು ದುರ್ಬಲ ಸ್ಥಿತಿಯಲ್ಲಿರುತ್ತಾರೆ. ಇದು ಮಕ್ಕಳಲ್ಲಿ ಸಾವಿನ ಅಪಾಯವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಿದೆ.
2010ರಲ್ಲಿ 40% ವಿದೇಶಿ ನೆರವು ಆಫ್ರಿಕನ್ ದೇಶಗಳಿಗೆ ಹೋಗಿದೆ. ಆದರೆ ಆ ಸಂಖ್ಯೆಯು ಈಗ ಕೇವಲ 25%ಕ್ಕೆ ಇಳಿದಿದೆ. ಆಫ್ರಿಕಾದಲ್ಲಿ ಮಕ್ಕಳ ಸಾವುಗಳಲ್ಲಿನ ಹೆಚ್ಚಳಗಳ ಹೊರತಾಗಿಯೂ ನೆರವು ಕಡಿತಗೊಳಿಸಿರುವುದು ಅಪೌಷ್ಠಿಕತೆ, ಕಾಯಿಲೆಗಳಿಂದ ನೂರಾರು ಮಿಲಿಯನ್ ಮಕ್ಕಳ ರಕ್ಷಣೆಗೆ ಅಡ್ಡಿಯುಂಟು ಮಾಡುತ್ತದೆ ಎಂದು ವರದಿ ತಿಳಿಸಿದೆ.
ಅಪೌಷ್ಟಿಕತೆಯು "ವಿಶ್ವದ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟು" ಮತ್ತು ಹವಾಮಾನ ಬದಲಾವಣೆಯು ಅದನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ಜಾಗತಿಕ ಆರೋಗ್ಯ ನಿಧಿಯನ್ನು ಹೆಚ್ಚಿಸಬೇಕೆಂದು ವರದಿಯಲ್ಲಿ ಆಗ್ರಹಿಸಲಾಗಿದೆ.
ಹವಾಮಾನ ಬದಲಾವಣೆಯ ಪರಿಣಾಮಗಳ ವಿರುದ್ಧ ಹೋರಾಡಲು ಉತ್ತಮ ಮಾರ್ಗವೆಂದರೆ ನಾವು ಅಪೌಷ್ಠಿಕತೆ ಕಡಿಮೆ ಮಾಡಲು ಜಾಗತಿಕ ಮಟ್ಟದಲ್ಲಿ ಹೂಡಿಕೆ ಮಾಡಬೇಕು, ನಾವು ಅಪೌಷ್ಟಿಕತೆಯನ್ನು ಪರಿಹರಿಸಿದರೆ, ನಾವು ಎಲ್ಲಾ ಇತರ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗುತ್ತದೆ. ತೀವ್ರ ಬಡತನ, ಮಲೇರಿಯಾ ಮತ್ತು ನ್ಯುಮೋನಿಯಾದಂತಹ ಮಾರಣಾಂತಿಕ ಕಾಯಿಲೆಗಳನ್ನು ಕೂಡ ಕಡಿಮೆ ಮಾಡಬಹುದಾಗಿದೆ ಎಂದು ವರದಿ ಹೇಳಿದೆ.