ಚೀನಾದಿಂದ ಭಾರತದ 4000 ಚದರ ಕಿಲೋಮೀಟರ್ ಭೂ ಕಬಳಿಕೆ: ರಾಹುಲ್ ಗಂಭೀರ ಆರೋಪ

PC: PTI
ಹೊಸದಿಲ್ಲಿ: ಚೀನಾ ದೇಶ 4000 ಚದರ ಕಿಲೋಮೀಟರ್ ವಿಸ್ತೀರ್ಣದಷ್ಟು ಭಾರತದ ಭೂಪ್ರದೇಶವನ್ನು ಕಬಳಿಸಿದೆ ಎಂದು ಗಂಭೀರ ಆರೋಪ ಮಾಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿಯವರು ಈ ಸಂಬಂಧ ಸರ್ಕಾರದಿಂದ ಉತ್ತರ ಬಯಸಿದ್ದಾರೆ. ಲೋಕಸಭೆಯಲ್ಲಿ ಮಾಡಿದ ಭಾಷಣದ ವೇಳೆ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ ಅವರು, ಅಮೆರಿಕ ಹೇರಿಕೆ ಮಾಡಿರುವ ಆಮದು ಸುಂಕ ಭಾರತೀಯ ಆರ್ಥಿಕತೆಗೆ ಮಾರಕವಾಗಲಿದೆ ಎಂದು ಪ್ರತಿಪಾದಿಸಿದರು.
ಸರ್ಕಾರ ನಮ್ಮ ಭೂಪ್ರದೇಶದ ವಿಚಾರದಲ್ಲಿ ಹಾಗೂ ಅಮೆರಿಕ ವಿಧಿಸಿರುವ ಸುಂಕದ ವಿಚಾರದಲ್ಲಿ ಏನು ಮಾಡುತ್ತಿದೆ ಎಂಬ ಬಗ್ಗೆ ಉತ್ತರಿಸಬೇಕು ಎಂದು ಪಟ್ಟು ಹಿಡಿದರು. ಆದರೆ ಬಿಜೆಪಿ ಅಧಿಕಾರಾವಧಿಯಲ್ಲಿ ಭಾರತದ ಒಂದು ಇಂಚು ನೆಲವನ್ನು ಕೂಡಾ ಚೀನಾಗೆ ಬಿಟ್ಟುಕೊಟ್ಟಿಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಚೀನಾ ಭಾರತದ ಭೂಭಾಗವನ್ನು ಅತಿಕ್ರಮಿಸಿಕೊಂಡಿದೆ ಎಂದು ಬಿಜೆಪಿಯ ಅನುರಾಗ್ ಠಾಕೂರ್ ತಿರುಗೇಟು ನೀಡಿದರು.
ಭಾರತ- ಚೀನಾ ರಾಜತಾಂತ್ರಿಕ ಸಂಬಂಧದ 75ನೇ ದಿನಾಚರಣೆ ಬಗ್ಗೆ ಮಾತನಾಡಿದ ರಾಹುಲ್, "ನಮ್ಮ 4000 ಚದರ ಕಿಲೋಮೀಟರ್ ಭೂಭಾಗದ ಮೇಲೆ ಚೀನಾ ಕುಳಿತಿದೆ. ನಮ್ಮ ವಿದೇಶಾಂಗ ಕಾರ್ಯದರ್ಶಿಗಳು ಚೀನಾದ ರಾಯಭಾರಿ ಜತೆ ಕೇಕ್ ಕತ್ತರಿಸುವುದು ನೋಡಿ ಆಘಾತವಾಯಿತು. ಚೀನಾ ಕಬಳಿಸಿರುವ 4000 ಚದರ ಕಿಲೋಮೀಟರ್ ಭೂಪ್ರದೇಶದ ವಿಚಾರದಲ್ಲಿ ನಿಜವಾಗಿ ಏನು ನಡೆಯುತ್ತಿದೆ?" ಎಂದು ಪ್ರಶ್ನಿಸಿದರು.
ಗಲ್ವಾನ್ ಘಟನೆಯನ್ನು ಉಲ್ಲೇಖಿಸಿದ ಅವರು, 2020ರಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರು. ಅವರು ಹುತಾತ್ಮರಾದ ಬಳಿಕವೂ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಯುತ್ತಿದೆ. ಪರಿಸ್ಥಿತಿ ಸಹಜತೆಗೆ ಬರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದಕ್ಕೂ ಮೊದಲು ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ನಮ್ಮ ಭೂಮಿಯನ್ನು ನಾವು ಮರಳಿ ಪಡೆಯಬೇಕು" ಎಂದು ಆಗ್ರಹಿಸಿದರು. "ನಮ್ಮ ಮಿತ್ರದೇಶ ಅಮೆರಿಕ ದಿಢೀರನೇ ನಮ್ಮ ಮೇಲೆ ಭಾರಿ ಸುಂಕ ವಿಧಿಸಿದ್ದು, ಇದು ನಮ್ಮ ಆರ್ಥಿಕತೆಗೆ ವಿನಾಶಕಾರಿಯಾಗಲಿದೆ" ಎಂದು ರಾಹುಲ್ ವಿಶ್ಲೇಷಿಸಿದರು.