ಚೀನಾ ಭಾರತದ ಯಾವುದೇ ನೆಲವನ್ನು ಆಕ್ರಮಿಸಿಕೊಂಡಿಲ್ಲ: ಎಸ್. ಜೈಶಂಕರ್
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (PTI)
ಹೊಸದಿಲ್ಲಿ: ಚೀನಾ ಭಾರತದ ಯಾವುದೇ ನೆಲವನ್ನು ಆಕ್ರಮಿಸಿಕೊಂಡಿಲ್ಲ. ಆದರೆ, ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿಯ ಪರಿಸ್ಥಿತಿಯು ಸ್ಪರ್ಧಾತ್ಮಕ, ಸೂಕ್ಷ್ಮ ಹಾಗೂ ಸವಾಲಿನದ್ದಾಗಿದೆ ಎಂದು ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ ಎಂದು The Indian Express ವರದಿ ಮಾಡಿದೆ.
ವಾಸ್ತವ ಗಡಿ ನಿಯಂತ್ರಣ ರೇಖೆಯು ಭಾರತ ಮತ್ತು ಚೀನಾ ಭೂಪ್ರದೇಶಗಳ ನಡುವಿನ ವಾಸ್ತವ ಗಡಿ ರೇಖೆಯಾಗಿದೆ.
ಪುಣೆಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಜೈಶಂಕರ್, ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಈ ಹಿಂದೆಂದೂ ಭಾರತ ಮತ್ತು ಚೀನಾ ದೇಶಗಳು ಸೇನಾಪಡೆಗಳನ್ನು ನಿಯೋಜಿಸುತ್ತಿರಲಿಲ್ಲ ಹಾಗೂ ಎರಡೂ ಸೇನಾಪಡೆಗಳು ತಮ್ಮ ಸೇನಾ ತುಕಡಿಗಳನ್ನು ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ ಪರಸ್ಪರ ದೂರ ಇಡುತ್ತಿದ್ದವು ಎಂದು ಹೇಳಿದರು.
“2020ರಲ್ಲಿ ಚೀನಾವು ತನ್ನ ಸೇನಾ ತುಕಡಿಗಳನ್ನು ವಾಸ್ತವ ನಿಯಂತ್ರಣ ರೇಖೆಯ ಸನಿಹಕ್ಕೆ ತಂದಿತ್ತು. ಅದಕ್ಕೆ ಪ್ರತಿಯಾಗಿ ನಾವೂ ಕೂಡಾ ನಮ್ಮ ಸೇನಾ ತುಕಡಿಗಳನ್ನು ಮುಂದಕ್ಕೆ ತಂದಿದ್ದರಿಂದ ಇಬ್ಬರ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು” ಎಂದು ಅವರು ತಿಳಿಸಿದರು. “ಇದಾದ ನಂತರ ಎರಡೂ ಸೇನಾಪಡೆಗಳು ಮೇಲುಗೈ ಸಾಧಿಸಲು ಹೋರಾಡುತ್ತಿದ್ದರೂ, ಯಾವುದೇ ಅತಿಕ್ರಮಣ ನಡೆದಿಲ್ಲ” ಎಂದು ಅವರು ಪ್ರತಿಪಾದಿಸಿದರು.
“ಚೀನಾವು ವಾಸ್ತವ ಗಡಿ ನಿಯಂತ್ರಣ ರೇಖೆಯ ಕಣಿವೆಗಳ ಮೇಲ್ಭಾಗಕ್ಕೆ ತನ್ನ ಸೇನಾ ತುಕಡಿಗಳನ್ನು ತರಲು ಪ್ರಯತ್ನಿಸಿತು. ಆದರೆ, ಭಾರತ ಕೂಡಾ ಚೀನಾಗೆ ಅದೇ ರೀತಿಯಲ್ಲಿ ಪ್ರತ್ಯುತ್ತರ ನೀಡಿತು” ಎಂದು ಅವರು ಹೇಳಿದರು.
ಆದರೆ, ಲೇಹ್ ನಲ್ಲಿ ನಿಯೋಜನೆಗೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಳೆದ ವರ್ಷದ ಜನವರಿ ತಿಂಗಳಲ್ಲಿ ಪ್ರಕಟಿಸಿದ್ದ ತಮ್ಮ ಸಂಶೋಧನಾ ಪ್ರಬಂಧದಲ್ಲಿ ಪೂರ್ವ ಲಡಾಖ್ ನ 65 ಗಸ್ತು ಪ್ರದೇಶಗಳ ಪೈಕಿ 26 ಗಸ್ತು ಪ್ರದೇಶಗಳಿಗೆ ಭಾರತವು ತನ್ನ ಪ್ರವೇಶವನ್ನು ಕಳೆದುಕೊಂಡಿದೆ ಎಂದು ಹೇಳಿದ್ದರು.
ವಿವಿಧ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಎರಡೂ ದೇಶಗಳು ಸಾವಿರಾರು ಸಂಖ್ಯೆಯ ಸೇನಾ ತುಕಡಿಗಳನ್ನು ಶಸ್ತ್ರಾಸ್ತ್ರಗಳು, ಟ್ಯಾಂಕರ್ ಗಳು ಹಾಗೂ ಯುದ್ಧ ವಿಮಾನಗಳೊಂದಿಗೆ ನಿಯೋಜಿಸಿವೆ. ಗ್ಯಾಲ್ವಾನ್ ಘರ್ಷಣೆಯ ನಂತರ ಗಡಿ ಉದ್ವಿಗ್ನತೆಯನ್ನು ಶಮನ ಮಾಡಲು ಚೀನಾ ಮತ್ತು ಭಾರತದ ನಡುವೆ ಹಲವಾರು ಸುತ್ತಿನ ಸೇನಾ ಪಡೆ ಹಾಗೂ ರಾಜತಾಂತ್ರಿಕ ಮಾತುಕತೆಗಳು ನಡೆದಿವೆ.