ಎಲ್ಒಸಿಯಲ್ಲಿ ರಕ್ಷಣಾ ಮೂಲಸೌಕರ್ಯ ನಿರ್ಮಾಣಕ್ಕೆ ಪಾಕ್ ಸೇನೆಗೆ ಚೀನಾ ನೆರವು: ಅಧಿಕಾರಿಗಳ ಹೇಳಿಕೆ
Photo: PTI
ಹೊಸದಿಲ್ಲಿ: ಮಾನವರಹಿತ ವೈಮಾನಿಕ ಮತ್ತು ಯುದ್ಧ ವೈಮಾನಿಕ ವಾಹನಗಳ ಪೂರೈಕೆ, ಸಂವಹನ ಗೋಪುರಗಳ ಸ್ಥಾಪನೆ ಮತ್ತು ಭೂಗತ ಕೇಬಲ್ಗಳ ಅಳವಡಿಕೆಯ ಜೊತೆಗೆ ಪಾಕಿಸ್ತಾನ ಸೇನೆಯು ನಿಯಂತ್ರಣ ರೇಖೆ (LOC)ಯಲ್ಲಿ ತನ್ನ ರಕ್ಷಣಾ ಮೂಲಸೌಕರ್ಯ ನಿರ್ಮಿಸುವುದರಲ್ಲಿ ಚೀನಾ ನೆರವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳು ಹೇಳುವಂತೆ ಇದು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಮತ್ತು ತಾನು ನಿರ್ಮಿಸಿರುವ ಜಲವಿದ್ಯುತ್ ಯೋಜನೆಗಳಿಗೆ ಭದ್ರತೆಯ ನೆಪದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಹೆಚ್ಚುತ್ತಿರುವ ನೆಲೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಪಾಕಿಸ್ತಾನದ ಸರ್ವಋತು ಸ್ನೇಹಿತನೆಂಬ ತನ್ನ ಸ್ಥಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಚೀನಾದ ಪ್ರಯತ್ನಗಳ ಭಾಗವಾಗಿದೆ.
ಇತ್ತೀಚಿಗೆ ಅಭಿವೃದ್ಧಿಗೊಳಿಸಲಾದ ಎಸ್ಎಚ್-15 ಟ್ರಕ್ ಮೌಂಟೆಡ್ ಹೋವಿಟ್ಜರ್ ಫಿರಂಗಿಗಳನ್ನು ಕಳೆದ ವರ್ಷ ಪಾಕಿಸ್ತಾನ ದಿನಾಚರಣೆ ವೇಳೆ ಪ್ರದರ್ಶಿಸಿದ ಬಳಿಕ ಎಲ್ಒಸಿಯಲ್ಲಿಯ ಕೆಲವು ಸ್ಥಳಗಳಲ್ಲಿ ಅವು ಕಂಡು ಬಂದಿವೆ ಎಂದು ಅಧಿಕಾರಿಗಳು ಹೇಳಿದರು.
‘ಶೂಟ್ ಆ್ಯಂಡ್ ಸ್ಕೂಟ್’ ಎಂದು ಕರೆಯಲ್ಪಡುವ, 236 ಎಸ್ಎಚ್-15ರ ಪೂರೈಕೆಗಾಗಿ ಪಾಕಿಸ್ತಾನವು ಚೀನಾದ ನಾರ್ಥ್ ಇಂಡಸ್ಟ್ರೀಸ್ ಗ್ರೂಪ್ ಕಾರ್ಪೊರೇಷನ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದು, ಮೊದಲ ಬ್ಯಾಚ್ ನ 2022, ಜನವರಿಯಲ್ಲಿ ವಿತರಿಸಲಾಗಿದೆ ಎಂದು ಲಂಡನ್ ನ ಜೇನ್ಸ್ ಡಿಫೆನ್ಸ್ ಮ್ಯಾಗಝಿನ್ ವರದಿ ಮಾಡಿದೆ.
2014ರಲ್ಲಿ ಕಂಡು ಬಂದಿದ್ದಂತೆ ಮುಂಚೂಣಿ ಪ್ರದೇಶಗಳಲ್ಲಿ ಚೀನಿ ಸೇನೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿ ಈಗ ಇಲ್ಲವಾಗಿದ್ದರೂ ಚೀನಿ ಸೈನಿಕರು ಮತ್ತು ಇಂಜಿನಿಯರ್ ಗಳು ಎಲ್ಒಸಿಯುದ್ದಕ್ಕೂ ಭೂಗತ ಬಂಕರ್ ಗಳು ಸೇರಿದಂತೆ ಮೂಲಸೌಕರ್ಯಗಳನ್ನು ಸ್ಥಾಪಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು ಅಧಿಕಾರಿಗಳು ಹೇಳಿದರು.
ಸೇನೆಯು ಈ ವಿಷಯದಲ್ಲಿ ಅಧಿಕೃತವಾಗಿ ಮೌನವನ್ನು ಕಾಯ್ದುಕೊಂಡಿದೆಯಾದರೂ ಗುಪ್ತಚರ ಏಜೆನ್ಸಿಗಳನ್ನು ನಿರಂತರವಾಗಿ ಚುರುಕುಗೊಳಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಜ್ಞರು ಹೇಳಿರುವಂತೆ ಚೀನಿ ಸೇನೆಯ ಉಪಸ್ಥಿತಿಗೆ ಚೀನಾದ 46 ಶತಕೋಟಿ ಡಾಲರ್ ಗಳ ಸಿಪಿಇಸಿ ಕಾರಣವಾಗಿದೆ. ಇದರಡಿ ಕರಾಚಿಯನ್ನು ಚೀನಾದ ಅಕ್ರಮ ವಶದಲ್ಲಿರುವ ಕಾರಾಕೋರಂ ಹೆದ್ದಾರಿ ಪ್ರದೇಶದ ಮೂಲಕ ಚೀನಾದ ಝಿಂಜಿಯಾಂಗ್ ಪ್ರಾಂತ್ಯದೊಂದಿಗೆ ಸಂಪರ್ಕಿಸಲಾಗುವುದು.
ಕಾರಾಕೋರಂ ಹೆದ್ದಾರಿಯನ್ನು ತಲುಪುವ ಪರ್ಯಾಯ ಮಾರ್ಗವಾಗಿ ಕಾರ್ಯ ನಿರ್ವಹಿಸಲಿರುವ ಸರ್ವಋತು ರಸ್ತೆಯ ನಿರ್ಮಾಣಕ್ಕೆ ಪೂರ್ವ ಸಿದ್ಧತೆಗಾಗಿ ಚೀನಿ ತಜ್ಞರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯ ಲೀಪಾ ಕಣಿವೆಯಲ್ಲಿ ಕೆಲವು ಸುರಂಗಗಳನ್ನು ತೋಡುತ್ತಿದ್ದಾರೆ ಎಂದೂ ಅಧಿಕಾರಿಗಳು ಸುಳಿವು ನೀಡಿದರು.
ಈ ಹಿಂದೆ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳಲ್ಲಿ ಚೀನಿಯರ ಉಪಸ್ಥಿತಿಯನ್ನು ಭಾರತವು ಬಲವಾಗಿ ಆಕ್ಷೇಪಿಸಿತ್ತು. ಗಡಿಯಾಚೆಯಿಂದ ಯಾವುದೇ ಕ್ರಮಗಳನ್ನು ವಿಫಲಗೊಳಿಸಲು ಸೇನೆಯು ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.