ಅರುಣಾಚಲ ಪ್ರದೇಶ ಅತ್ಲೀಟ್ಗಳಿಗೆ ಚೀನಾ ವೀಸಾ ನಿರಾಕರಿಸಿದ್ದು ಒಲಿಂಪಿಕ್ ಸನ್ನದಿಗೆ ವಿರುದ್ಧ: ಅನುರಾಗ ಠಾಕೂರ್
ಅನುರಾಗ ಠಾಕೂರ್ | Photo: PTI
ಕೊಯಮತ್ತೂರು : ಅರುಣಾಚಲ ಪ್ರದೇಶದ ಮೂವರು ಅತ್ಲೀಟ್ಗಳಿಗೆ ಚೀನಾ ವೀಸಾಗಳನ್ನು ನಿರಾಕರಿಸಿದ್ದನ್ನು ‘ತಾರತಮ್ಯ’ ಎಂದು ಇಲ್ಲಿ ಖಂಡಿಸಿದ ಕೇಂದ್ರ ಕ್ರೀಡಾ ಸಚಿವ ಅನುರಾಗ ಠಾಕೂರ್ ಅವರು,ಇದು ಒಲಿಂಪಿಕ್ ಸನ್ನದಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಅರುಣಾಚಲ ಪ್ರದೇಶದ ಮಹಿಳಾ ವುಷು ಕ್ರೀಡಾಪಟುಗಳಾದ ಒನಿಲು ತೆಗಾ ಮತ್ತು ಮೇಪಂಗ್ ಲಾಮ್ಗು ಅವರು ಹಾಂಗ್ಝೌ ಏಶಿಯನ್ ಗೇಮ್ಸ್ ಸಂಘಟನಾ ಸಮಿತಿಯಿಂದ ಅನುಮತಿ ಪಡೆದಿದ್ದರೂ ಚೀನಾಕ್ಕೆ ಪ್ರವೇಶ ವೀಸಾಗಳಾಗಿರುವ ತಮ್ಮ ಮಾನ್ಯತಾ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ, ಮೂರನೇ ಕ್ರೀಡಾಪಟು ನೈಮನ್ ವಾಂಗ್ಸು ಅವರು ಮಾನ್ಯತಾ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದರಾದರೂ ನಂತರ ಅವರಿಗೆ ಚೀನಾ ಪ್ರವೇಶವನ್ನು ನಿರಾಕರಿಸಲಾಗಿತ್ತು.
ಚೀನಾದ ನಿಲುವನ್ನು ವಿರೋಧಿಸಿ ಠಾಕೂರ್ ಆ ದೇಶಕ್ಕೆ ತನ್ನ ಭೇಟಿಯನ್ನು ರದ್ದುಗೊಳಿಸಿದ್ದರು.
ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್,‘ನೀವೇ ನೋಡುತ್ತಿರುವಂತೆ ನಾನು ಚೀನಾದಲ್ಲಿಲ್ಲ,ಕೊಯಮತ್ತೂರಿನಲ್ಲಿ ಇದ್ದೇನೆ ಮತ್ತು ನನ್ನ ಕ್ರೀಡಾಪಟುಗಳನ್ನು ಬೆಂಬಲಿಸಿದ್ದೇನೆ. ಒಲಿಂಪಿಕ್ ಸನ್ನದಿಗೆ ವಿರುದ್ಧವಾಗಿರುವ ಚೀನಾದ ಈ ತಾರತಮ್ಯದ ನಿಲುವು ನಮಗೆ ಸರ್ವಥಾ ಸ್ವೀಕಾರಾರ್ಹವಲ್ಲ ’ ಎಂದು ಹೇಳಿದರು.
ಚೀನಾಕ್ಕೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿರುವ ಭಾರತವು,ತನ್ನ ಹಿತಾಸಕ್ತಿಗಳ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ತಾನು ಹೊಂದಿದ್ದೇನೆ ಎಂದು ಸ್ಪಷ್ಟಪಡಿಸಿದೆ.