ಚೀನಾದ ‘ಹಗರಣ ಕೇಂದ್ರ’ | ಸೈಬರ್ ಅಪರಾಧ ನಡೆಸುವಂತೆ ಭಾರತೀಯರಿಗೆ ಬಲವಂತ
ಹೊಸದಿಲ್ಲಿ : ಸಾವಿರಾರು ಭಾರತೀಯರನ್ನು ಆಗ್ನೇಯ ಏಷ್ಯಾ ದೇಶಗಳಿಗೆ ಸಾಗಾಟ ಮಾಡಲಾಗಿದೆ. ಅಲ್ಲಿ ಅವರು ಚೀನಾ ನಡೆಸುತ್ತಿರುವ ಹಗರಣ ಕೇಂದ್ರಗಳಲ್ಲಿ ಸೈಬರ್ ಕ್ರಿಮಿನಲ್ ಗಳಾಗಿ ಕಾರ್ಯ ನಿರ್ವಹಿಸುವಂತೆ ಬಲವಂತಪಡಿಸಲಾಗಿದೆ ಎಂದು ಸಿಬಿಐ ತನ್ನ ಪ್ರಥಮ ಮಾಹಿತಿ ವರದಿಯಲ್ಲಿ ಆರೋಪಿಸಿದೆ.
ಸೈಬರ್ ಕ್ರೈಮ್ ಗೆ ಸಂಬಂಧಿಸಿದ ಸುಮಾರು 7,000 ದೂರುಗಳು ನ್ಯಾಷನಲ್ ಸೈಬರ್ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಡೈಲಿಯಲ್ಲಿ ದಾಖಲಾಗಿವೆ. ಹೆಚ್ಚಿನ ವಂಚನೆಗಳು ಮೂರು ಆಗ್ನೇಯ ಏಷಿಯಾದ ದೇಶಗಳಾದ ಕಾಂಬೋಡಿಯಾ, ಮ್ಯಾನ್ಮಾರ್ ಹಾಗೂ ಲಾವೋಸ್ನಲ್ಲಿ ಮೂಲವನ್ನು ಹೊಂದಿವೆ ಎಂದು ಇಂಡಿಯನ್ ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಇಂಡಿಯನ್ ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಅಪರಾಧಗಳನ್ನು ಮಾಡಲು ಬಳಸುವ ಹಲವು ವೆಬ್ ಅಪ್ಲಿಕೇಷನ್ ಗಳನ್ನು ಮ್ಯಾಂಡರಿನ್ ಭಾಷೆಯಲ್ಲಿ ಬರೆದಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ. ಆದುದರಿಂದ ಚೀನಾ ಸಂಪರ್ಕವನ್ನು ನಾವು ನಿರಾಕರಿಸಲಾರೆವು ಎಂದು ಕುಮಾರ್ ತಿಳಿಸಿದ್ದಾರೆ.
ದುಬಾಯಿ, ಬ್ಯಾಂಕಾಂಕ್ ನಲ್ಲಿ ಉತ್ತಮ ವೇತನದ ಹುದ್ದೆಗಳ ಭರವಸೆ ನೀಡುವ ಮೂಲಕ ಜನರಿಗೆ ಆಮಿಷ ಒಡ್ಡಲಾಯಿತು ಹಾಗೂ ಅವರನ್ನು ಆಗ್ನೇಯ ಏಷಿಯಾಗಳಿಗೆ ಸಾಗಾಟ ಮಾಡಲಾಯಿತು. ಅವರು ಚೀನಾ ನಡೆಸುವ ಹಗರಣ ಕೇಂದ್ರಗಳಲ್ಲಿ ಸೈಬರ್ ಅಪರಾಧಿಗಳಾಗಿ ಕೆಲಸ ಮಾಡಲು ಬಲವಂತಪಡಿಸಲಾಯಿತು ಎಂದು ಸಿಬಿಐ ತನ್ನ ವರದಿಯಲ್ಲಿ ಪ್ರತಿಪಾದಿಸಿದೆ.
ಗೃಹ ಸಚಿವಾಲಯ, ಟೆಲಿಕಾಂ ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಹಲವು ಸಭೆಗಳನ್ನು ನಡೆಸಿದ ಬಳಿಕ ಸಿಬಿಐ ಪ್ರಕರಣ ದಾಖಲಿಸಿದೆ. ಅಂತಹ ವಂಚನೆಗಳಿಗೆ ದಾರಿ ಮಾಡಿ ಕೊಡುವ ಬ್ಯಾಂಕಿಂಗ್ ಹಾಗೂ ಟೆಲಿಕಾಂ ವಲಯಗಳನ್ನು ಗುರುತಿಸುವಂತೆ ಹಾಗೂ ಲೋಪದೋಷಗಳನ್ನು ಸರಿಪಡಿಸುವಂತೆ ಬ್ಯಾಂಕ್ ಹಾಗೂ ಸಚಿವಾಲಯಗಳು ವಿನಂತಿಸಿವೆ.
ಈ ವರದಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಿವಾಸಿಯಾಗಿರುವ ಸದ್ದಾಂ ಶೇಖ್ ಅವರ ಉದಾಹರಣೆಯನ್ನು ನೀಡಿದೆ.
ಸದ್ದಾಂ ಅವರು ದಿಲ್ಲಿ ಮೂಲದ ಮಾನವ ಸಂಪನ್ಮೂಲ ಸಮಾಲೋಚನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಂದ ವ್ಯಾಟ್ಸ್ ಆ್ಯಪ್ ಕರೆ ಸ್ವೀಕರಿಸಿದ್ದರು. ಆ ವ್ಯಕ್ತಿಗಳು ಥಾಯ್ಲ್ಯಾಂಡ್ ನಲ್ಲಿ ಉದ್ಯೋಗದ ಕುರಿತು ಮಾಹಿತಿ ನೀಡಿದ್ದರು. ಸದ್ದಾಂ ಅವರ ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿ ಮಾಲಿಕ ಹಾಗೂ ಏಜೆಂಟ್ ನನ್ನು ಭೇಟಿಯಾಗಿದ್ದರು. ಸದ್ದಾಂಗೆ ವೀಸಾ ಒದಗಿಸಲು ಅವರು 1.4 ಲಕ್ಷ ರೂಪಾಯಿ ಪಡೆದುಕೊಂಡಿದ್ದರು.
ಪೆಬ್ರವರಿ 10ರಂದು ಕೋಲ್ಕತ್ತಾಕ್ಕೆ ತಲುಪುವಂತೆ ಶೇಖ್ ಗೆ ತಿಳಿಸಲಾಗಿತ್ತು. ಅಲ್ಲಿಂದ ಶೇಖ್ ಬ್ಯಾಂಕಾಕ್ ಗೆ ತೆರಳಿದ್ದರು. ಬ್ಯಾಂಕಾಂಕ್ ವಿಮಾನ ನಿಲ್ದಾಣದಿಂದ ಇನ್ನೋರ್ವ ಏಜೆಂಟ್ ಅವರಿಂದ ಹಣ ಪಡೆದುಕೊಂಡಿದ್ದ. ಅನಂತರ ಶೇಖ್ ಅವರನ್ನು ಲಾವೋಸ್ ಗೆ ಕರೆದುಕೊಂಡು ಹೋಗಿದ್ದ. ಶೇಖ್ ಅಲ್ಲಿ ಸಿಕ್ಕಿಂನಿಂದ ಬಂದ ಇನ್ನೊಬ್ಬ ಏಜೆಂಟ್ನನ್ನು ಭೇಟಿಯಾಗಿದ್ದರು. ಬಳಿಕ ‘‘ಶೇಖ್ರನ್ನು ಗೋಲ್ಡನ್ ಟ್ರಯಾಂಗಲ್ ಇಕಾನಾಮಿಕ್ ರೆನ್ ಗೆ ಕರೆದೊಯ್ಯಲಾಗಿತ್ತು. ಅವರು ಇತರ ಚೀನಾ ಏಜೆಂಟರಿಗೆ ಹಾಗೂ ಭಾರೀತೀಯ ಏಜೆಂಟರಿಗೆ ಪರಿಚಯಿಸಿಕೊಂಡಿದ್ದರು’’ ಎಂದು ಸಿಬಿಐ ತಿಳಿಸಿದೆ.
ಆಲ್ಲಿ ಆನ್ಲೈನ್ ನಲ್ಲಿ ಕ್ರಿಪ್ಟೋಕರೆನ್ಸಿ ಹೂಡಿಕೆ ಅವಕಾಶಗಳಲ್ಲಿ ವಂಚನೆ ನಡೆಸಲು ಭಾರತ, ಕೆನಡಾ ಹಾಗೂ ಅಮೆರಿಕದ ಜನರಂತೆ ಸೋಗು ಹಾಕಲು ಶೇಖ್ ಗೆ ಬಲವಂತಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಆ ಹಗರಣ ಕೇಂದ್ರದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು ಹಾಗೂ ಬ್ಯಾಂಕಾಂಕ್ ಗೆ ತಲುಪಿದ್ದರು. ಅಲ್ಲಿಂದ ಎಪ್ರಿಲ್ 19ರಂದು ಭಾರತಕ್ಕೆ ಹಿಂದಿರುಗಿದ್ದರು ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದೆ.