ಮಣಿಪುರ ಹಿಂಸಾಚಾರದ ಬಗ್ಗೆ ಪೋಸ್ಟ್ ಹಾಕಿದ್ದಕ್ಕೆ ಎಫ್ಐಆರ್: ಕ್ರೈಸ್ತ ಧರ್ಮಗುರು ಆತ್ಮಹತ್ಯೆ
ಫಾದರ್ ಅನಿಲ್ ಫ್ರಾನ್ಸಿಸ್ (thenewsminute.com)
ಭೋಪಾಲ್: ಮಣಿಪುರ ಹಿಂಸಾಚಾರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿ ಇತ್ತೀಚೆಗೆ ಮಧ್ಯಪ್ರದೇಶ ಪೊಲೀಸರಿಂದ ಪ್ರಕರಣ ದಾಖಲಿಸಲ್ಪಟ್ಟಿದ್ದ ಸಿರೋ ಮಲಬಾರ್ ಚರ್ಚ್ ಪಾದ್ರಿಯೊಬ್ಬರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಣಿಪುರ ಹಿಂಸಾಚಾರದ ಪೋಸ್ಟ್ ಅನ್ನು ವಾಟ್ಸ್ ಆ್ಯಪ್ ಗುಂಪಿನಲ್ಲಿ ಹಂಚಿಕೊಂಡಿದ್ದಕ್ಕಾಗಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಗರ್ಹಕೋಟಾದಲ್ಲಿರುವ ಸೇಂಟ್ ಅಲ್ಫೋನ್ಸಾ ಅಕಾಡೆಮಿಯ ವ್ಯವಸ್ಥಾಪಕ ಫಾದರ್ ಅನಿಲ್ ಫ್ರಾನ್ಸಿಸ್ ವಿರುದ್ಧ ಪೊಲೀಸರು ಒಂದು ತಿಂಗಳ ಹಿಂದೆ ಪ್ರಕರಣ ದಾಖಲಿಸಿದ್ದರು.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಇದರಿಂದ ಪಾದ್ರಿ ಒತ್ತಡಕ್ಕೆ ಒಳಗಾಗಿದ್ದರು ಎಂದು ಸಾಗರ ಧರ್ಮಪ್ರಾಂತ್ಯದ ಗುರುಗಳು ಆರೋಪಿಸಿದ್ದಾರೆ.
“ಒಂದು ತಿಂಗಳ ಹಿಂದೆ ಅವರು ಮಣಿಪುರ ವಿಷಯಕ್ಕೆ ಸಂಬಂಧಿಸಿದ ಸಂದೇಶವನ್ನು ಪೋಸ್ಟ್ ಮಾಡಿದ್ದರು, ಅದರಲ್ಲಿ ಭಾರತದ ರಾಷ್ಟ್ರಧ್ವಜವೂ ಇತ್ತು. ಅವರ ಮಾಜಿ ವಿದ್ಯಾರ್ಥಿ, ಸಂಘ ಪರಿವಾರದ ಗುಂಪುಗಳ ಸದಸ್ಯರೊಂದಿಗೆ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ,'' ಎಂದು ಫಾ. ಜೋಸ್ ಮಲೆಕುಡಿ ಅವರು thenewsminute.com ಗೆ ತಿಳಿಸಿದ್ದಾರೆ.
“ಆ ಪೋಸ್ಟ್ನಲ್ಲಿ ರಾಷ್ಟ್ರಧ್ವಜದ ವಿರುದ್ಧ ಏನೂ ಇರಲಿಲ್ಲ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಳ್ಳಲು ಸಿದ್ಧರಿಲ್ಲದಿದ್ದರೂ ಕೆಲ ಗುಂಪುಗಳು ಒತ್ತಡ ಹೇರಿದ್ದವು” ಎಂದು ಅವರು ಆರೋಪಿಸಿದ್ದಾರೆ.
"ಫಾದರ್ ಅನಿಲ್ ಫ್ರಾನ್ಸಿಸ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಣಿಪುರ ಹಿಂಸಾಚಾರದ ಕುರಿತು ಹಂಚಿಕೊಂಡ ಪೋಸ್ಟ್ಗೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಿಸಲಾದ ಎಫ್ಐಆರ್ನಿಂದ ಒತ್ತಡದಲ್ಲಿದ್ದರು ಎಂದು ನಮಗೆ ಗೊತ್ತಿತ್ತು. ಆತ್ಮಹತ್ಯೆ ಪತ್ರದಲ್ಲಿ ಅವರು ತಮ್ಮ ದೇಹವನ್ನು ಅಂತ್ಯಸಂಸ್ಕಾರ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅವರಿಗೆ ನೀಡಿದ ಕಾರ್ಯಗಳಿಗೆ ಬದ್ಧತೆ ಮತ್ತು ಅವರು ಬೋಧಿಸಿದ ಮೌಲ್ಯಗಳಿಗೆ ಸಮರ್ಪಿತರಾಗಿದ್ದ ಫಾದರ್ ಅನಿಲ್ ಫ್ರಾನ್ಸಿಸ್ ಅವರ ನಿಧನದಿಂದ ನಮಗೆ ತುಂಬಾ ದುಃಖವಾಗಿದೆ ಎಂದು ಸಾಗರ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ.ಸಾಬು ಪುತ್ಥನಪುರಕಲ್ ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳು ಮತ್ತು ಪಾದ್ರಿಗಳನ್ನು ಹಲವು ರೀತಿಯಲ್ಲಿ ಗುರಿಯಾಗಿಸಿಕೊಳ್ಳಲಾಗುತ್ತಿದೆ. ನಮ್ಮ ಡಯಾಸಿಸ್ ಅಡಿಯಲ್ಲಿ ಬರುವ ಸೈಂಟ್ ಫ್ರಾನ್ಸಿಸ್ ಅನಾಥಾಶ್ರಮದ ಸುತ್ತಲಿನ ಭೂಮಿಯನ್ನು ಬ್ರಿಟಿಷ್ ಸರ್ಕಾರವು ಹಿಂದೆ ನಮಗೆ ಗುತ್ತಿಗೆಗೆ ನೀಡಿತ್ತು. ಅನಾಥಾಶ್ರಮವು 50 ವರ್ಷಗಳಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾವು ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕಾರಣವಿಲ್ಲದೆ ಅವರು ಅದನ್ನು ನವೀಕರಿಸುತ್ತಿಲ್ಲ. ಕಳೆದ ವರ್ಷ, ಮಕ್ಕಳ ಕಲ್ಯಾಣ ಸಮಿತಿಯ ಸಹಾಯದಿಂದ, ಪೊಲೀಸರು ನಮ್ಮ ಮಕ್ಕಳನ್ನು ಅನಾಥಾಶ್ರಮದಿಂದ ಸ್ಥಳಾಂತರಿಸಲು ಪ್ರಯತ್ನಿಸಿದರು. ನಮ್ಮ ಕೆಲವು ಅರ್ಚಕರು ಅದನ್ನು ತಡೆಯಲು ಮುಂದಾದಾಗ ಅವರನ್ನು ಠಾಣೆಗೆ ಕರೆದೊಯ್ಯುಲಾಗಿದ್ದು, ಧಾರಿ ಮಧ್ಯೆ ವಾಹನದಲ್ಲೇ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು” ಎಂದು ಪಾದ್ರಿ ಆರೋಪಿಸಿದ್ದಾರೆ.