ದ್ವೇಷ ಭಾಷಣಕ್ಕೆ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಪ್ರಜೆಗಳಿಗೆ ತಿಳಿದಿರಬೇಕು: ಸುಪ್ರೀಂ
ಸುಪ್ರೀಂ ಕೋರ್ಟ್| Photo: PTI
ಹೊಸದಿಲ್ಲಿ: ದ್ವೇಷ ಭಾಷಣ ಮಾಡಿದರೆ, ಅವರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ಪ್ರಜೆಗಳು ತಿಳಿದಿರಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಿಸಿದೆ.
ಪ್ರಚೋದನಕಾರಿ ಭಾಷಣ ಆರೋಪದ ಪ್ರಕರಣಗಳಿಗೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಒಳಗೊಂಡ 17 ಅರ್ಜಿಗಳ ಗುಚ್ಛದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಬೇಳಾ ಎಂ. ತ್ರಿವೇದಿ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು.
ದ್ವೇಷ ಭಾಷಣಗಳನ್ನು ನಿಯಂತ್ರಿಸಲು ವಿಸ್ತೃತ ಮಾರ್ಗಸೂಚಿಯನ್ನು ಜಾರಿಗೊಳಿಸಬೇಕು ಎಂದು ಕೆಲವು ದೂರುದಾರರು ನ್ಯಾಯಾಲಯವನ್ನು ಆಗ್ರಹಿಸಿದರು.
ವಿಚಾರಣೆಯ ಸಂದರ್ಭ ಓರ್ವ ದೂರುದಾರರನ್ನು ಪ್ರತಿನಿಧಿಸಿದ ವಕೀಲರಾದ ನಿಝಾಮ್ ಎಂ. ಪಾಶಾ, ದ್ವೇಷ ಭಾಷಣ ಮಾಡುವ ಇತಿಹಾಸ ಇರುವವರಿಗೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಆದರೆ, ನ್ಯಾಯಾಲಯ, ದ್ವೇಷ ಭಾಷಣಕ್ಕೆ ಸಂಬಂಧಿಸಿದ ಒಂದೊಂದು ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದುದರಿಂದ ಇದಕ್ಕೆ ಸಂಬಂಧಿಸಿ ಒಂದು ಆಡಳಿತಾತ್ಮಕ ಕಾರ್ಯವಿಧಾನ ರೂಪಿಸುವ ಚಿಂತನೆ ಇದೆ ಎಂದು ಸ್ಪಷ್ಟಪಡಿಸಿತು.ಈ ಪ್ರಕರಣದಲ್ಲಿ ಸಂಬಂಧಿತ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ನ್ಯಾಯಾಲಯ ಪಾಶಾ ಅವರಿಗೆ ನಿರ್ದೇಶಿಸಿತು.
‘‘ಭಾರತದಂತಹ ದೇಶಗಳಲ್ಲಿ ಇಂತಹ ಕೆಲವು ಸಮಸ್ಯೆಗಳು ಇರುತ್ತವೆ’’ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು. ‘‘ಅಗತ್ಯ ಇರುವಲ್ಲೆಲ್ಲ ಕ್ರಮ ಕೈಗೊಳ್ಳಲು ಹಾಗೂ ಅದನ್ನು ಪರಿಶೀಲಿಸಲು ನಮ್ಮಲ್ಲಿ ಸಾಕಷ್ಟು ಆಡಳಿತ ವ್ಯವಸ್ಥೆ ಇದೆಯೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕು’’ ಎಂದು ಅವರು ಹೇಳಿದರು.
ತರುವಾಯ ಇನ್ನೋರ್ವ ದೂರುದಾರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪದವಾದ ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ನೀಡಿದ ಹೇಳಿಕೆ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ಕುರಿತು ನ್ಯಾಯಾಲಯದ ಮುಂದೆ ಉಲ್ಲೇಖಿಸಿದರು.
ಆದರೆ, ನ್ಯಾಯಮೂರ್ತಿ ಖನ್ನಾ, ದ್ವೇಷ ಭಾಷಣಕ್ಕೆ ಸಂಬಂಧಿಸಿ ಒಂದೊಂದು ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತು. ಅಲ್ಲದೆ, ನ್ಯಾಯಂಗ ನಿಂದನೆಗೆ ಸಂಬಂಧಿಸಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಜೈನ್ ಅವರಿಗೆ ತಿಳಿಸಿತು.