ಶ್ರೀನಗರ | ಚೆಕ್ ಪೋಸ್ಟ್ ನಲ್ಲಿ ಟ್ರಕ್ ನಿಲ್ಲಿಸಿಲ್ಲ ಎಂದು ಗುಂಡಿಕ್ಕಿದ ಸೇನಾ ಸಿಬ್ಬಂದಿ: ಚಾಲಕ ಮೃತ್ಯು
ಕಾಶ್ಮೀರದ ಜನರ ಜೀವಗಳಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಪಿಡಿಪಿ
ಸಾಂದರ್ಭಿಕ ಚಿತ್ರ | PC - indianexpress
ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಸಂಗ್ರಹಮಾ ಪ್ರದೇಶದಲ್ಲಿ ಟ್ರಕ್ ಚಾಲಕನೋರ್ವನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದ್ದು, ಸೇನಾಧಿಕಾರಿಗಳ ಕ್ರಮವನ್ನು ಪಿಡಿಪಿ ಖಂಡಿಸಿದೆ.
ಭಯೋತ್ಪಾದಕರ ಚಲನವಲನದ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಹಿನ್ನೆಲೆ ಫೆಬ್ರವರಿ 5ರಂದು, ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನ ಅಮರ್ಗಾದಲ್ಲಿ ಭದ್ರತಾ ಪಡೆಗಳು ಚೆಕ್ ಪೋಸ್ಟ್ ಸ್ಥಾಪಿಸಿದ್ದವು.
ಅನುಮಾನಾಸ್ಪದ ಟ್ರಕ್ ಅತಿ ವೇಗದಲ್ಲಿ ಚೆಕ್ ಪಾಯಿಂಟ್ ಬಳಿ ಬರುವುದು ನಮ್ಮ ಗಮನಕ್ಕೆ ಬಂದಿದೆ. ಟ್ರಕ್ ಅನ್ನು ನಿಲ್ಲಿಸುವಂತೆ ಪದೇ ಪದೇ ಸೂಚನೆ ನೀಡಿದ್ದೇವೆ. ಚಾಲಕ ಟ್ರಕ್ ನಿಲ್ಲಿಸುವ ಬದಲು ಚೆಕ್ ಪೋಸ್ಟ್ ಬಳಿ ಅತಿ ವೇಗವಾಗಿ ಟ್ರಕ್ ನ್ನು ಚಲಾಯಿಸಿಕೊಂಡು ತೆರಳಿದ್ದಾನೆ. ಇದರಿಂದಾಗಿ ಸೇನಾ ವಾಹನ ಟ್ರಕ್ ನ್ನು 23 ಕಿಲೋಮೀಟರ್ ಗಳಿಗೂ ಹೆಚ್ಚು ದೂರ ಹಿಂಬಾಲಿಸಿ ಬಳಿಕ ಟ್ರಕ್ ನ ಟೈರ್ ಮೇಲೆ ಗುಂಡಿನ ದಾಳಿ ನಡೆಸಿದೆ. ಕೊನೆಗೆ ಬಾರಾಮುಲ್ಲಾದ ಸಂಗ್ರಹಮಾ ಚೌಕ್ ನಲ್ಲಿ ಟ್ರಕ್ ನಿಂತಿದೆ. ಗಾಯಗೊಂಡಿದ್ದ ಟ್ರಕ್ ಚಾಲಕನನ್ನು ಬಾರಾಮುಲ್ಲಾಗೆ ಸ್ಥಳಾಂತರಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಸೇನೆಯು ತಿಳಿಸಿದೆ.
ಮೃತ ಟ್ರಕ್ ಚಾಲಕನನ್ನು ಬಾರಾಮುಲ್ಲಾದ ಸೋಪೋರ್ ನ ಬೊಮೈ ನಿವಾಸಿ ವಸೀಮ್ ಮಜೀದ್ ಮಿರ್ (32) ಎಂದು ಗುರುತಿಸಲಾಗಿದೆ. ಟ್ರಕ್ ಅನ್ನು ಹೆಚ್ಚಿನ ತನಿಖೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ, ಸೇನಾಧಿಕಾರಿಗಳ ಕ್ರಮವನ್ನು ಟೀಕಿಸಿದ್ದಾರೆ. ಕಥುವಾದಲ್ಲಿ ನಾಗರಿಕನ ಹತ್ಯೆಯ ನಂತರ, ಸೋಪೋರ್ ನಲ್ಲಿ ಮತ್ತೋರ್ವ ನಾಗರಿಕನನ್ನು ಸೇನೆಯು ಗುಂಡಿಕ್ಕಿ ಹತ್ಯೆ ನಡೆಸಿರುವುದು ಆಘಾತಕಾರಿಯಾಗಿದೆ. 23 ಕಿ.ಮೀ.ಗಳಿಗೂ ಹೆಚ್ಚು ಕಾಲ ಟ್ರಕ್ ಅನ್ನು ಬೆನ್ನಟ್ಟಿದ ನಂತರ, ಅವರು ಟೈರ್ ಗಳಿಗೆ ಗುಂಡು ಹಾರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ, ಆದರೆ ನಾಗರಿಕನ ಮೇಲೆ ಗುಂಡಿಕ್ಕಿದ್ದಾರೆ ಎಂಬುದು ಎಷ್ಟು ವಿಚಿತ್ರ. ಕಾಶ್ಮೀರದ ಜನರ ಜೀವಗಳಿಗೆ ಬೆಲೆ ಇಲ್ಲವೇ? ಎಲ್ಲರನ್ನೂ ಅನುಮಾನದಿಂದ ನೋಡುವ ಮೂಲಕ ನೀವು ಈ ಕಡಿವಾಣವಿಲ್ಲದ ಶಿಕ್ಷೆಯನ್ನು ಎಷ್ಟು ದಿನ ಸಮರ್ಥಿಸಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.