ನಾಗರಿಕರ ಹತ್ಯೆ ಪ್ರಕರಣ | ಯೋಧರ ವಿರುದ್ಧ ನಾಗಾಲ್ಯಾಂಡ್ ಸಲ್ಲಿಸಿದ ಅರ್ಜಿಗೆ ಕೇಂದ್ರದಿಂದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ನಾಗಾಲ್ಯಾಂಡ್ ಮೊನ್ ಜಿಲ್ಲೆಯಲ್ಲಿ 2021 ಡಿಸೆಂಬರ್ ನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ಸಂದರ್ಭ 13 ನಾಗರಿಕರ ಹತ್ಯೆಗೈದ ಆರೋಪಕ್ಕೆ ಒಳಗಾಗಿರುವ ಭಾರತೀಯ ಸೇನೆಯ 30 ಮಂದಿ ಯೋಧರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ನಾಗಲ್ಯಾಂಡ್ ಸರಕಾರ ಸಲ್ಲಿಸಿದ ರಿಟ್ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆ ಕೋರಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ, ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ನಾಗಾಲ್ಯಾಂಡ್ ಸರಕಾರದ ರಿಟ್ ಅರ್ಜಿ ಕುರಿತಂತೆ ರಕ್ಷಣಾ ಸಚಿವಾಲಯಕ್ಕೆ ನೋಟಿಸು ಜಾರಿಗೊಳಿಸಿದೆ. ಅಲ್ಲದೆ 6 ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಶಸಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ 1958ರ ಅಡಿಯಲ್ಲಿ 30 ಮಂದಿ ಯೋಧರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಫೆಬ್ರವರಿಯಲ್ಲಿ ಅನುಮತಿ ನಿರಾಕರಿಸಿತ್ತು.
ಕೇಂದ್ರ ಸರಕಾರ ಅನುಮತಿ ನಿರಾಕರಿಸಿರುವುದರ ವಿರುದ್ಧ ನಾಗಲ್ಯಾಂಡ್ ಸರಕಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದೆ. 30 ಮಂದಿ ಆರೋಪಿ ಸೇನಾ ಸಿಬ್ಬಂದಿ ವಿರುದ್ಧ ಪೊಲೀಸರಲ್ಲಿ ಪುರಾವೆಗಳಿವೆ ಎಂದು ನಾಗಾಲ್ಯಾಂಡ್ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ನಾಗಾಲ್ಯಾಂಡ್ನ ಪೂರ್ವ ಒಟಿಂಗ್ ಗ್ರಾಮದಲ್ಲಿ 2021 ಡಿಸೆಂಬರ್ನಲ್ಲಿ ಗಣಿ ಕೆಲಸಗಾರರನ್ನು ಕರೆದೊಯ್ಯುತ್ತಿದ್ದ ಪಿಕ್ ಅಪ್ ಟ್ರಕ್ ಮೇಲೆ ಸೇನಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ ರಾಜ್ಯ ವಿಧಾನ ಸಭೆ ಈಶಾನ್ಯದಿಂದ ಮುಖ್ಯವಾಗಿ ನಾಗಲ್ಯಾಂಡ್ನಿಂದ ಶಸಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಹಿಂಪಡೆಯುವಂತೆ ಕೋರಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿತ್ತು.
ಈ ಘಟನೆ ಕುರಿತಂತೆ ರಾಜ್ಯ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ಸೇನಾಧಿಕಾರಿಗಳ ಪತ್ನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ತಮ್ಮ ಪತಿಯರ ವಿರುದ್ಧ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿದ್ದರು.