ಕಿರಿಯರಿಗೆ ಸೂಕ್ತ ವೇತನ ನೀಡುವುದನ್ನು ಹಿರಿಯ ವಕೀಲರು ಕಲಿಯಬೇಕು : ಸಿಜೆಐ ಚಂದ್ರಚೂಡ್ ಕಿವಿಮಾತು
AIR ನಲ್ಲಿ ನಿರೂಪಕರಾಗಿದ್ದ ದಿನಗಳನ್ನು ನೆನಪಿಸಿಕೊಂಡ ಸಿಜೆಐ
ಡಿ.ವೈ.ಚಂದ್ರಚೂಡ್ | PTI
ಹೊಸದಿಲ್ಲಿ : ವಕೀಲಿಕೆ ಕಲಿಯಲು ತಮ್ಮ ಕಚೇರಿಗಳಿಗೆ ಸೇರ್ಪಡೆಯಾಗುವ ಯುವ ವಕೀಲರಿಗೆ ಸೂಕ್ತ ವೇತನ ಹಾಗೂ ಭತ್ಯೆ ನೀಡುವುದನ್ನು ಹಿರಿಯ ವಕೀಲರು ಕಲಿಯಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕಿವಿಮಾತು ಹೇಳಿದ್ದಾರೆ.
All India Radioಗೆ ಸಂದರ್ಶನ ನೀಡಿರುವ ಅವರು, ವಕೀಲಿಕೆ ವೃತ್ತಿ ಕಠಿಣವಾಗಿದ್ದು, ಆರಂಭಿಕ ವರ್ಷಗಳಲ್ಲಿ ಹಾಕುವ ಬುನಾದಿಯು ಯುವ ವಕೀಲರು ತಮ್ಮ ವೃತ್ತಿ ಜೀವನದುದ್ದಕ್ಕೂ ಉತ್ತಮ ಸ್ಥಿರತೆ ಹೊಂದಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ವಕೀಲಿಕೆ ವೃತ್ತಿಯಲ್ಲಿ ಯಾವಾಗಲೂ ಏರುಪೇರು ಇರುತ್ತದೆ. ವಕೀಲಿಕೆ ವೃತ್ತಿಯಲ್ಲಿ ತಿಂಗಳ ಕೊನೆಯಲ್ಲಿ ಸಂಪಾದಿಸುವ ಮೊತ್ತವು ತೀರಾ ಹೆಚ್ಚಿರುವುದಿಲ್ಲ” ಎಂದು ಚಂದ್ರಚೂಡ್ ಹೇಳಿದ್ದಾರೆ.
ಹೀಗಾಗಿ ಹೊಸದಾಗಿ ವಕೀಲಿಕೆ ವೃತ್ತಿ ಆರಂಭಿಸುವವರು ಅದಕ್ಕೆ ಕಚ್ಚಿಕೊಳ್ಳುವಂತೆ, ಕಠಿಣ ಪರಿಶ್ರಮ ಪಡುವಂತೆ ಹಾಗೂ ತಮ್ಮ ಕೆಲಸದಲ್ಲಿ ಪ್ರಾಮಾಣಿಕವಾಗಿರುವಂತೆ ಪ್ರೋತ್ಸಾಹಿಸುವುದು ಮುಖ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.
“ಅದೇ ರೀತಿ ನಮ್ಮ ಸಂರಚನೆಗಳೂ ಬದಲಾಗಬೆಕು. ಉದಾಹರಣೆಗೆ, ತಮ್ಮ ಕಚೇರಿಯನ್ನು ಪ್ರವೇಶಿಸುವ ಕಿರಿಯ ವಕೀಲರಿಗೆ ಹೇಗೆ ಸೂಕ್ತ ಸಂಭಾವನೆ, ವೇತನ ಹಾಗೂ ಭತ್ಯೆಗಳನ್ನು ನೀಡಬೇಕು ಎಂಬುದನ್ನು ಹಿರಿಯ ವಕೀಲರು ಕಲಿಯಬೇಕು” ಎಂದು ಅವರು ಕಿವಿಮಾತು ಹೇಳಿದ್ದಾರೆ.
“ಯುವ ವಕೀಲರು ಅವರ ಕಚೇರಿಗೆ ಕಲಿಯಲೆಂದು ಬರುತ್ತಾರೆ. ಅವರಿಗೂ ಹಂಚಿಕೊಳ್ಳಲು ಸಾಕಷ್ಟಿರುತ್ತದೆ. ಹೀಗಾಗಿ ಇದು ದ್ವಿಮುಖ ಪ್ರಕ್ರಿಯೆಯಾಗಿದ್ದು, ಒಳ ಸೆಳೆದುಕೊಳ್ಳುವಿಕೆ, ಹಂಚಿಕೆ ಹಾಗೂ ತಿದ್ದುವಿಕೆಯನ್ನು ಅವರು ಯುವ ವಕೀಲರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ, ತಮ್ಮ ಕಾಲೇಜಿನ ದಿನಗಳಲ್ಲಿ ತಾವು ಆಲ್ ಇಂಡಿಯಾ ರೇಡಿಯೊದಲ್ಲಿ ನಿರೂಪಕರಾಗಿದ್ದ ದಿನಗಳನ್ನೂ ಅವರು ಸ್ಮರಿಸಿದ್ದಾರೆ.