ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿ | ನ್ಯಾಯಾಲಯಗಳ ಮೂಲಭೂತ ಸೌಕರ್ಯಗಳು ಬಲಿಷ್ಠಗೊಳ್ಳಬೇಕು : ಸಿಜೆಐ ಚಂದ್ರಚೂಡ್
ಸಿಜೆಐ ಚಂದ್ರಚೂಡ್ | PTI
ಚಂಡೀಗಢ : ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ನ್ಯಾಯಾಲಯಗಳ ಮೂಲಭೂತ ಸೌಕರ್ಯಗಳು ಬಲಿಷ್ಠಗೊಳ್ಳಬೇಕಿದೆ ಎಂದು ಶನಿವಾರ ಪ್ರತಿಪಾದಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ತಗ್ಗಿಸಲು ಲೋಕ್ ಅದಾಲತ್ ನಂತಹ ವಿವಿಧ ಮಾಧ್ಯಮಗಳನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದೂ ಹೇಳಿದರು.
ಜನರಿಗೆ ಅನುಕೂಲವಾಗಲೆಂದು ನ್ಯಾಯಾಲಯದ ತೀರ್ಪುಗಳನ್ನು ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಸ್ಥಳೀಯ ಭಾಷೆಗಳಿಗೆ ಅನುವಾದಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯು ಏರ್ಪಡಿಸಿದ್ದ 37ನೇ ಪದವಿ ಪ್ರದಾನ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ನ್ಯಾಯಾಲಯಗಳಲ್ಲಿ ಬಾಕಿಯುಳಿದಿರುವ ಪ್ರಕರಣಗಳ ಕುರಿತು ಕೇಳಲಾದ ಪ್ರಶ್ನೆಗೆ, ಜನರು ಆಸ್ಪತ್ರೆಗಳ ಮೇಲೆ ನಂಬಿಕೆ ಇರಿಸಿರುವಂತೆ ನ್ಯಾಯಾಲಯಗಳ ಮೇಲೂ ವಿಶ್ವಾಸವಿರಿಸಿರುವುದು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಲು ಒಂದು ಕಾರಣ ಎಂದು ಸಿಜೆಐ ಚಂದ್ರಚೂಡ್ ಅಭಿಪ್ರಾಯಪಟ್ಟರು.
“ಈ ಏರಿಕೆಯನ್ನು ನಿಭಾಯಿಸಲು ನಾವು ನ್ಯಾಯಾಲಯಗಳ ಮೂಲಸೌಕರ್ಯವನ್ನು ವೃದ್ಧಿಸಬೇಕಿದೆ. ಆಸ್ಪತ್ರೆಗಳ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸಿದಂತೆಯೇ ನ್ಯಾಯಾಲಯಗಳಲ್ಲಿನ ಮೂಲಸೌಕರ್ಯಗಳನ್ನೂ ಅಭಿವೃದ್ಧಿಪಡಿಸಬೇಕು” ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯಗಳು ವಿವಿಧ ಮಾಧ್ಯಮಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಪ್ರತಿಪಾದಿಸಿದ ಸಿಜೆಐ, ಕಳೆದ ವಾರ ವಿಶೇಷ ಲೋಕ್ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಈ ಅದಾಲತ್ ಗಳಲ್ಲಿ ಕಳೆದ ಐದು ವರ್ಷಗಳ 1,000 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹೇಳಿದರು.
ಈ ವರ್ಷದ ಬೇಸಿಗೆ ರಜಾಕಾಲದಲ್ಲಿ ಸುಪ್ರೀಂ ಕೋರ್ಟ್ ನ ಸುಮಾರು 21 ಪೀಠಗಳು 4,000 ಪ್ರಕರಣಗಳ ವಿಚಾರಣೆ ನಡೆಸಿವೆ. ಈ ಪೈಕಿ 1,710 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದೂ ಅವರು ತಿಳಿಸಿದರು.
ವಿವಿಧ ಮಾಧ್ಯಮಗಳ ಮೂಲಕ ನಾವು ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಬಹುದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.