ದಿಲ್ಲಿಯಲ್ಲಿ ಮರಗಳ ಕಡಿತ | ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಸಂಜೀವ್ ಖನ್ನಾ
ಸಂಜೀವ್ ಖನ್ನಾ | PC : PTI
ಹೊಸ ದಿಲ್ಲಿ: ದಿಲ್ಲಿ ರಿಡ್ಜ್ ಪ್ರದೇಶದಲ್ಲಿ ಅಕ್ರಮವಾಗಿ ನೂರಾರು ಮರಗಳನ್ನು ಕಡಿಯಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸೋಮವಾರ ಹಿಂದೆ ಸರಿದಿದ್ದಾರೆ.
ಕೆಲವು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ಸಂಬಂಧ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ವೈಯಕ್ತಿಕ ಪ್ರಮಾಣ ಪತ್ರ ಸಲ್ಲಿಸುವಂತೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾರಿಗೆ ನೋಟಿಸ್ ಜಾರಿ ಮಾಡಿತ್ತು.
ಡಿ.ವೈ.ಚಂದ್ರಚೂಡ್ ನಿವೃತ್ತರಾದ ನಂತರ, ನ್ಯಾ. ಸಂಜಯ್ ಕುಮಾರ್ ರೊಂದಿಗೆ ನ್ಯಾಯಪೀಠದಲ್ಲಿರುವ ಹಾಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, “ನಾನು ಎನ್ಎಎಲ್ಎಸ್ಎ ಅಧ್ಯಕ್ಷನಾಗಿದ್ದಾಗ ಪಾಟ್ನಾದಲ್ಲಿನ ಜೈಲುಗಳಿಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ರೊಂದಿಗೆ ಪ್ರವಾಸ ಕೈಗೊಂಡಿದ್ದೆ. ಹೀಗಾಗಿ, ನಾನು ಈ ಅರ್ಜಿಗಳ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ಹೇಳಲು ಬಯಸುತ್ತೇನೆ” ಎಂದು ತಿಳಿಸಿದರು.
ನವೆಂಬರ್ 27ರಿಂದ ಪ್ರಾರಂಭವಾಗುವ ವಾರದಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನು ಅವರನ್ನು ಹೊರತುಪಡಿಸಿರುವ ಪೀಠದೆದುರು ಈ ಅರ್ಜಿಗಳನ್ನು ಪಟ್ಟಿ ಮಾಡುವಂತೆ ನ್ಯಾಯಪೀಠವು ಆದೇಶಿಸಿತು.