ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಕಾನೂನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಸಂಜೀವ್ ಖನ್ನಾ
ಸಿಜೆಐ ಸಂಜೀವ್ ಖನ್ನಾ | PC : PTI
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತರು(CEC) ಮತ್ತು ಚುನಾವಣಾ ಆಯುಕ್ತರನ್ನು(EC) ಆಯ್ಕೆ ಮಾಡುವ ಉನ್ನತ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸಂಜೀವ್ ಖನ್ನಾ ಅವರು ಮಂಗಳವಾರ ಹಿಂದೆ ಸರಿದಿದ್ದಾರೆ.
ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಜೊತೆ ಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸಂಜೀವ್ ಖನ್ನಾ, ಆರು ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರಿಗೆ ಅರ್ಜಿಗಳನ್ನು ಆಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಈ ವಿಷಯವನ್ನು ತಾವು ಭಾಗವಾಗಿರದ ಪೀಠದ ಮುಂದೆ ಪಟ್ಟಿ ಮಾಡುವಂತೆ ಸೂಚಿಸಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಮತ್ತು ವಕೀಲ ಪ್ರಶಾಂತ್ ಭೂಷಣ್, ನ್ಯಾಯಮೂರ್ತಿ ಖನ್ನಾ ನೇತೃತ್ವದ ಹಿಂದಿನ ಪೀಠವು ಈ ವಿಷಯದಲ್ಲಿ ನೋಟಿಸ್ ಜಾರಿಗೊಳಿಸಿ ಮಧ್ಯಂತರ ಆದೇಶಗಳನ್ನು ನೀಡಿತ್ತು. ಸಿಜೆಐ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದರೆ ಯಾವುದೇ ಆಕ್ಷೇಪಣೆಯಿಲ್ಲ ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಪೀಠವು ಸೂಚನೆ ನೀಡಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯ್ದೆ- 2023ರಡಿಯಲ್ಲಿ ತಡೆ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಇದು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಿಂದ ಸಿಜೆಐ ಅನ್ನು ಹೊರಗಿಡುತ್ತದೆ.