ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಸಿಜೆಐ
ಚುನಾವಣಾ ಬಾಂಡ್ ತೀರ್ಪಿನ ಕುರಿತು ರಾಷ್ಟ್ರಪತಿಗಳ ಪರಿಶೀಲನೆಗೆ ಕೋರಿ ಪತ್ರ ಬರೆದಿದ್ದ ಅದೀಶ್ ಅಗರ್ವಾಲ್
ಡಿ ವೈ ಚಂದ್ರಚೂಡ್ | Photo: X
ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ವಕೀಲರ ಸಂಘದ ಅಧ್ಯಕ್ಷ ಅದೀಶ್ ಅಗರ್ವಾಲ್ ಅವರನ್ನು ಇಂದು ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಹೊರಡಿಸಿದ ತೀರ್ಪನ್ನು ಪರಿಶೀಲಿಸಬೇಕೆಂದು ಕೋರಿ ಸ್ವಯಂಪ್ರೇರಿತ ಅಪೀಲನ್ನು ಅದೀಶ್ ಮಾಡಿದ್ದರು.
ಈ ವಿಚಾರವನ್ನು ಇಂದು ಅದೀಶ್ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಸಿಜೆಐ, “ಹಿರಿಯ ವಕೀಲರಾಗಿರುವ ಹೊರತಾಗಿ ನೀವು ಎಸ್ಸಿಬಿಎ ಅಧ್ಯಕ್ಷರು. ನನ್ನ ಸ್ವಯಂಪ್ರೇರಿತ ಅಧಿಕಾರಗಳ ಕುರಿತಂತೆ ನೀವು ಪತ್ರ ಬರೆದಿದ್ದೀರಿ. ಇವುಗಳೆಲ್ಲಾ ಪ್ರಚಾರ ಉದ್ದೇಶ ಹೊಂದಿವೆ. ನಾನು ಇನ್ನಷ್ಟು ಮಾತಾಡುವಂತೆ ಮಾಡಬೇಡಿ. ಅದು ಚೆನ್ನಾಗಿರದು,” ಎಂದು ಖಾರವಾಗಿ ಹೇಳಿದರು.
“ನಾವು ಇದನ್ನು ಬೆಂಬಲಿಸುವುದಿಲ್ಲ,” ಎಂದು ಹೇಳಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅಗರ್ವಾಲ ಅವರ ಸ್ವಯಂಪ್ರೇರಿತ ಅಪೀಲು ವಿಚಾರದಿಂದ ದೂರ ಉಳಿದರು.
ಕೆಲ ದಿನಗಳ ಹಿಂದೆ ಅದೀಶ್ ಅಗರ್ವಾಲ್ ಅವರು ಸುಪ್ರೀಂ ಕೋರ್ಟ್ನ ಚುನಾವಣಾ ಬಾಂಡ್ ತೀರ್ಪಿನ ಕುರಿತು ರಾಷ್ಟ್ರಪತಿಗಳ ಪರಿಶೀಲನೆಗೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಸುದ್ದಿಯಾಗಿದ್ದರು.
ಇದರ ಬೆನ್ನಲ್ಲೇ ಸುಪ್ರಿಂ ಕೋರ್ಟ್ ವಕೀಲರ ಸಂಘ ಪ್ರತಿಕ್ರಿಯಿಸಿ, ರಾಷ್ಟ್ರಪತಿಗೆ ಪತ್ರ ಬರೆಯಲು ಅಗರ್ವಾಲ್ ಅವರಿಗೆ ಸಂಘದ ಯಾವುದೇ ಸದಸ್ಯರು ಸೂಚಿಸಿಲ್ಲ ಎಂದು ಹೇಳಿ ಅವರ ಕ್ರಮದಿಂದ ದೂರ ಸರಿದು ನಿಂತಿದ್ದರು.