Fact Check | ಬಯಲು ಶೌಚದಲ್ಲಿ ಭಾರತವು ವಿಶ್ವದಲ್ಲಿ ನಂ.1 ಆಗಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿಯ ಪೋಸ್ಟ್ ಅಪ್ಪಟ ಸುಳ್ಳು
PC : boomlive.in
ಹೊಸದಿಲ್ಲಿ: ಬಯಲು ಶೌಚದಲ್ಲಿ ಭಾರತವು ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಬೆಟ್ಟು ಮಾಡಿರುವ ಗ್ರಾಫಿಕ್ ನಿರೂಪಣೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು,ಇದು ಅಪ್ಪಟ ಸುಳ್ಳು ಎನ್ನುವುದನ್ನು ಸತ್ಯಶೋಧಕ ವೆಬ್ಸೈಟ್ ಬೂಮ್ ಬಯಲುಗೊಳಿಸಿದೆ.
ಭಾರತಕ್ಕೆ ಹೋಲಿಸಿದರೆ ಎರಿಟ್ರಿಯಾ,ಚಾಡ್ ಮತ್ತು ನೈಜರ್ನಂತಹ ದೇಶಗಳಲ್ಲಿ ಬಯಲು ಶೌಚದ ಪ್ರಮಾಣ ಅಧಿಕವಾಗಿದೆ ಎನ್ನುವುದನ್ನು ಬೂಮ್ ಕಂಡುಕೊಂಡಿದೆ.
‘ಬಯಲು ಶೌಚ,2023’ಶೀರ್ಷಿಕೆಯನ್ನು ಹೊಂದಿರುವ ಗ್ರಾಫಿಕ್ ನಿರೂಪಣೆಯು ‘ಆಲ್ಬರ್ಟಾ ಇನ್ಸ್ಟಿಟ್ಯೂಟ್ ಆಫ್ ಡೇಟಾ ಕಲೆಕ್ಷನ್’ ಅನ್ನು ತನ್ನ ಮೂಲವಾಗಿ ಉಲ್ಲೇಖಿಸಿದೆ. ಜಾಗತಿಕ ಬಯಲು ಶೌಚದ ಪ್ರಮಾಣಗಳನ್ನು ತೋರಿಸುವ ಅದು ಪ್ರತಿ ಚ.ಕಿ.ಮೀ.ಗೆ 1,000ಕ್ಕೂ ಅಧಿಕ ಜನರು ಬಯಲು ಶೌಚ ಮಾಡುವ ಏಕೈಕ ದೇಶವೆಂಬ ದಾರಿ ತಪ್ಪಿಸುವ ಹೇಳಿಕೆಯ ಮೂಲಕ ಸುಳ್ಳೇ ಭಾರತವನ್ನು ಮೊದಲ ಸ್ಥಾನದಲ್ಲಿರಿಸಿದೆ.
ಬೂಮ್ ಗ್ರಾಫಿಕ್ ನಿರೂಪಣೆಯನ್ನು ಪರಿಶೀಲಿಸಿದ್ದು,ಅದು ನಕಲಿ ಎನ್ನುವುದು ಬೆಳಕಿಗೆ ಬಂದಿದೆ. ಉಲ್ಲೇಖಿತ ಮೂಲ ‘ಆಲ್ಬರ್ಟಾ ಇನ್ಸ್ಟಿಟ್ಯೂಟ್ ಆಫ್ ಡೇಟಾ ಕಲೆಕ್ಷನ್’ ಅಸ್ತಿತ್ವದಲ್ಲಿಲ್ಲ ಮತ್ತು ಅದು ಬಯಲು ಶೌಚದ ಕುರಿತು ಇಂತಹ ಯಾವುದೇ ಅಧ್ಯಯನವನ್ನು ನಡೆಸಿಲ್ಲ.
ಬೂಮ್ ಬಯಲು ಶೌಚ ಕುರಿತು ಇತ್ತೀಚಿನ ಜಾಗತಿಕ ದತ್ತಾಂಶಗಳನ್ನು ಪರಿಶೀಲಿಸಿದ್ದು,ತೀರ ಇತ್ತೀಚಿನ ಲಭ್ಯ ಮಾಹಿತಿಯು 2022ರದ್ದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ದತ್ತಾಂಶಗಳು ಪೂರ್ವ ಆಫ್ರಿಕಾದ ದೇಶ ಎರಿಟ್ರಿಯಾ ಶೇ.67ರಷ್ಟು ಅತ್ಯಂತ ಹೆಚ್ಚಿನ ಬಯಲು ಶೌಚ ದರವನ್ನು ಹೊಂದಿದೆ ಮತ್ತು ಭಾರತದಲ್ಲಿ ಈ ಪ್ರಮಾಣ ಕೇವಲ ಶೇ.11ರಷ್ಟಿದೆ ಎಂದು ತೋರಿಸಿದೆ. ಆದಾಗ್ಯೂ ಡಬ್ಲ್ಯುಎಚ್ಒ ಡ್ಯಾಷ್ಬೋರ್ಡ್ ಪ್ರಕಾರ ಈ ದತ್ತಾಂಶಗಳು 2016ರದ್ದಾಗಿವೆ. 2022ರ ದತ್ತಾಂಶಗಳ ಪ್ರಕಾರ ನೈಜರ್(ಶೇ.65), ಚಾಡ್(ಶೇ,63),ಬೆನಿನ್ (ಶೇ.48.5) ನಂತರದ ಸ್ಥಾನಗಳಲ್ಲಿದ್ದು,ಇವೆಲ್ಲವೂ ಸಬ್-ಸಹಾರನ್ ಆಫ್ರಿಕಾದಲ್ಲಿವೆ.
ಡಬ್ಲ್ಯುಎಚ್ಒ/ಯೂನಿಸೆಫ್ನ ಜಾಯಿಂಟ್ ಮಾನಿಟರಿಂಗ್ ಪ್ರೋಗ್ರಾಂ (ಜೆಎಂಪಿ) ಪ್ರಕಾರ ಬಯಲು ಶೌಚದ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಸ್ಥಿರವಾಗಿ ಇಳಿಕೆಯಾಗುತ್ತಿದೆ. 2000 ಮತ್ತು 2022ರ ನಡುವೆ ಬಯಲು ಶೌಚವನ್ನು ಮಾಡುವವರ ಸಂಖ್ಯೆ 130 ಕೋಟಿಯಿಂದ 41.90 ಕೋ.ಗೆ ಇಳಿದಿದೆ. ಆದರೂ 2022ರಲ್ಲಿ 36 ದೇಶಗಳು ಈಗಲೂ ಶೇ.5 ಮತ್ತು ಶೇ.25ರ ನಡುವೆ ಬಯಲು ಶೌಚ ದರಗಳನ್ನು ಹೊಂದಿದ್ದವು ಮತ್ತು 13 ದೇಶಗಳಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಬಯಲು ಶೌಚ ಪದ್ಧತಿಗೆ ಅಂಟಿಕೊಂಡಿದ್ದರು.
ಅವರ್ ವರ್ಲ್ಡ್ ಇನ್ ಡೇಟಾ ಪ್ರಕಾರ ಆಫ್ರಿಕಾದಲ್ಲಿಯ 20ಕ್ಕೂ ಅಧಿಕ ದೇಶಗಳು ಭಾರತಕ್ಕಿಂತ ಹೆಚ್ಚಿನ ಬಯಲು ಶೌಚ ದರಗಳನ್ನು ಹೊಂದಿವೆ. 2022ರ ವೇಳೆಗೆ ಭಾರತವು ಪಟ್ಟಿಯಲ್ಲಿ 30ನೇ ಸ್ಥಾನದಲ್ಲಿದೆ ಎನ್ನುವುದನ್ನೂ ಈ ದತ್ತಾಂಶಗಳು ತೋರಿಸಿವೆ. ಗಮನಾರ್ಹವಾಗಿ 2000ರಲ್ಲಿ ಭಾರತದಲ್ಲಿ ಶೇ.73.3ರಷ್ಟಿದ್ದ ಬಯಲು ಶೌಚ ಪ್ರಮಾಣವು 2022ರಲ್ಲಿ ಶೇ.11.1ಕ್ಕೆ ಇಳಿಕೆಯಾಗಿದೆ.
ಭಾರತದಲ್ಲಿ 2014ರಲ್ಲಿ ಸ್ವಚ್ಛ ಭಾರತ ಅಭಿಯಾನವು ಆರಂಭಗೊಂಡಿದ್ದು, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಿದ್ದರು. ಆದರೆ ಭಾರತವು ಸಂಪೂರ್ಣ ಬಯಲು ಶೌಚ ಮುಕ್ತವಾಗಿಲ್ಲ. 2022ರ ಡಬ್ಲ್ಯುಎಚ್ಒ ವರದಿಯಂತೆ ಭಾರತದ ಶೇ.17ರಷ್ಟು ಗ್ರಾಮೀಣ ಜನರು ಈಗಲೂ ಬಯಲು ಶೌಚವನ್ನು ಮಾಡುತ್ತಿದ್ದರು ಮತ್ತು ಶೇ.25ರಷ್ಟು ಗ್ರಾಮೀಣರು ಮೂಲಭೂತ ನೈರ್ಮಲ್ಯ ಸೌಲಭ್ಯಗಳನ್ನು ಹೊಂದಿರಲಿಲ್ಲ.
ಈ ಲೇಖನವನ್ನು ಮೊದಲು boomlive.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.