ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ
ಟಿಎಂಸಿ , ಬಿಜೆಪಿ| PC : PTI
ಬಿರ್ಬೂಮ್ (ಪಶ್ಚಿಮಬಂಗಾಳ) : ಲೋಕಸಭೆ ಚುನಾವಣೆಗೆ ಸೋಮವಾರ ನಡೆದ ನಾಲ್ಕನೇ ಹಂತದ ಮತದಾನದ ಸಂದರ್ಭ ಪಶ್ಚಿಮಬಂಗಾಳದ ಹಲವು ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ.
ದುರ್ಗಾಪುರದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಬಿರ್ಬೂಮ್ನಲ್ಲಿ ಮತಗಟ್ಟೆಯ ಹೊರಗಿದ್ದ ತಮ್ಮ ಸ್ಟಾಲ್ ಅನ್ನು ಆಡಳಿತಾರೂಢ ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಟಿಎಂಸಿ ನಾಯಕ ರಾಮ್ ಪ್ರಸಾದ್ ಹಲ್ದಾರ್, ‘‘ಬೆಳಗ್ಗೆ 6 ಗಂಟೆಗೆ ಈ (ಬಿಜೆಪಿ) ಜನರು ಕೇಂದ್ರದ ಪಡೆಗಳೊಂದಿಗೆ ಆಗಮಿಸಿದರು ಹಾಗೂ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು. ನಾವು ಇದರ ವಿರುದ್ಧ ಪ್ರತಿಭಟನೆ ನಡೆಸಿದೆವು. ಮತದಾರರು ಕೂಡ ಪ್ರತಿಭಟನೆ ನಡೆಸಿದರು. ಅವರು ಹೊರಗಿನಿಂದ ಮತದಾನದ ಏಜೆಂಟರನ್ನು ಕರೆ ತರಲು ಪ್ರಯತ್ನಿಸಿದರು. ಕೇಂದ್ರ ಪಡೆಗಳು ಜನರಿಗೆ ಬೆದರಿಕೆ ಒಡ್ಡಿದವು ಹಾಗೂ ಅವರ ಮೇಲೆ ಪ್ರಭಾವ ಬೀರಿದವು. ಜನರು ಇದನ್ನು ವಿರೋಧಿಸಿದರು’’ ಎಂದಿದ್ದಾರೆ.
ಬಿಜೆಪಿ ಶಾಸಕ ಲಕ್ಷ್ಮಣ್ ಗೌರಿ, ದುರ್ಗಾಪುರದ ಶಾಲೆಯಲ್ಲಿರುವ ಮತಗಟ್ಟೆಯಿಂದ ನಮ್ಮ ಮತದಾನದ ಏಜೆಂಟ್ನನ್ನು ಹೊರಗೆ ಹಾಕಲಾಯಿತು ಎಂದು ಆರೋಪಿಸಿದ್ದಾರೆ.