ಜೆಇಇ ಪರೀಕ್ಷೆಯಲ್ಲಿ ಅನುತ್ತೀರ್ಣ: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಅದಿತಿ ಮಿಶ್ರಾ (Photo credit: NDTV)
ಗೋರಖ್ ಪುರ: ಜೆಇಇ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ.
ಅದಿತಿ ಮಿಶ್ರಾ(18) ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಈಕೆ ಆತ್ಮಹತ್ಯೆಗೆ ಮೊದಲು ʼಅಮ್ಮ, ಅಪ್ಪ, ನನ್ನನ್ನು ಕ್ಷಮಿಸಿ, ನಿಮ್ಮ ಕನಸುಗಳನ್ನು ಈಡೇರಿಸಲು ನನಗೆ ಸಾಧ್ಯವಾಗಲಿಲ್ಲʼ ಎಂದು ಬರೆದಿದ್ದಾರೆ.
ಉತ್ತರ ಪ್ರದೇಶದ ಗೋರಖ್ಪುರದ ಬೆಟಿಯಾಹಟಾದಲ್ಲಿರುವ ಮೊಮೆಂಟಮ್ ಕೋಚಿಂಗ್ ಸೆಂಟರ್ ನಲ್ಲಿ ಅದಿತಿ ಎರಡು ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ವಿದ್ಯಾರ್ಥಿನಿಲಯದಲ್ಲಿ ತಂಗಿದ್ದ ಅದಿತಿ ಜೆಇಇ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಬಳಿಕ ಬುಧವಾರ ಬೆಳಗ್ಗೆ ಪೋಷಕರೊಂದಿಗೆ ಮಾತನಾಡಿದ್ದರು. ತಂದೆಯ ಬಳಿ ಮೊಬೈಲ್ ರೀಚಾರ್ಜ್ ಮಾಡುವಂತೆಯೂ ಹೇಳಿದ್ದರು. ವರದಿಯ ಪ್ರಕಾರ, ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಅದಿತಿ ಖಿನ್ನತೆಗೆ ಒಳಗಾಗಿದ್ದರು. ತನ್ನ ಗೆಳತಿ ಹಾಸ್ಟೆಲ್ ರೂನಿಂದ ಹೊರ ಹೋದ ಸಂದರ್ಭದಲ್ಲಿ ಅದಿತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೆಳತಿ ಹಾಸ್ಟೆಲ್ ಗೆ ವಾಪಾಸ್ಸು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಸ್ಥಳದಿಂದ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿ ಅಭಿನವ್ ತ್ಯಾಗಿ ಪ್ರತಿಕ್ರಿಯಿಸಿ, ಘಟನೆಯ ಬಗ್ಗೆ ಸಂತ ಕಬೀರ್ ನಗರ ಜಿಲ್ಲೆಯ ಮಿಶ್ರೌಲಿಯಾ ಗ್ರಾಮದ ನಿವಾಸಿಗಳಾದ ಅದಿತಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.