ಶಾಲಾ ಬಸ್ ಚಾಲಕನಿಂದ 12ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಆರೋಪಿ ಬಂಧನ
ರಾಂಚಿ: ಕೊಲ್ಕತ್ತಾ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಛತ್ತೀಸ್ ಗಢದ ಶಾಲಾ ಬಸ್ ಚಾಲಕನೊಬ್ಬ ಅದೇ ಶಾಲೆಯ 17 ವರ್ಷ ವಯಸ್ಸಿನ, 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಝಿಯಾಕ್ ಪುರ ಪೊಲೀಸರು ಬಂಧಿಸಿದ್ದಾರೆ.
ತಿರುಚಿದ ಫೋಟೊದಿಂದ ವಿದ್ಯಾರ್ಥಿನಿಯನ್ನು ಬ್ಲ್ಯಾಕ್ಮೇಲ್ ಮಾಡಿ ಈ ಕೃತ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ. ಆರೋಪಿಯು ಛತ್ತೀಸ್ ಗಢದ ಮಣಿಮಜ್ರಾದ ನಿವಾಸಿ ಎಂದು ತಿಳಿದು ಬಂದಿದೆ. ಮೇ ಹಾಗೂ ಜುಲೈ ತಿಂಗಳ ನಡುವೆ ಮೂರು ಬಾರಿ ವಿದ್ಯಾರ್ಥಿನಿಯ ಮನೆಯಲ್ಲೇ ಅತ್ಯಾಚಾರ ಎಸಗಿದ್ದಾಗಿ ಪೊಲೀಸರು ಹೇಳಿದ್ದಾರೆ.
ಈ ಆಘಾತ ತಾಳಲಾಗದೇ ವಿದ್ಯಾರ್ಥಿನಿ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ, ಭಾರತೀಯ ದಂಡಸಂಹಿತೆಯ ಸೆಕ್ಷನ್ 376 ಮತ್ತು 506 ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಕೂಡಾ ಪ್ರಕರಣ ದಾಖಲಾಗಿದೆ.
ಆರೋಪಿ ಚಾಲಕ ಹಲವು ತಿಂಗಳಿಂದ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ ಹಾಗೂ ಸ್ನೇಹಕ್ಕಾಗಿ ಮನವಿ ಮಾಡಿಕೊಂಡಿದ್ದ. ಇದಕ್ಕೆ ನಿರಾಕರಿಸಿದಾಗ, ಆತ ಕುಟುಂಬದ ಸಮಾರಂಭವೊಂದರಲ್ಲಿ ಈಕೆ ಇದ್ದ ಫೋಟೊವನ್ನು ತಿರುಚಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ವಿವರಿಸಿದ್ದಾಳೆ.
ಮೇ 18ರಂದು ವಿದ್ಯಾರ್ಥಿನಿ ಹಾಗೂ ಆಕೆಯ ಸಹೋದರಿ ಮಾತ್ರ ಮನೆಯಲ್ಲಿದ್ದು, ಪೋಷಕರು ಕೆಲಸಕ್ಕೆ ತೆರಳಿದ್ದರು. ಈ ಸಮಯವನ್ನು ಉಪಯೋಗಿಸಿದ ಆರೋಪಿಯು ತನ್ನ ಜತೆ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸಿದ್ದು, ಇದಕ್ಕೆ ಒಪ್ಪದಿದ್ದರೆ ಈ ಆಕ್ಷೇಪಾರ್ಹ ಚಿತ್ರವನ್ನು ಎಲ್ಲೆಡೆ ಪಸರಿಸುಸುವುದಾಗಿ ಬೆದರಿಕೆ ಹಾಕಿದ ಎಂದು ದೂರಿನಲ್ಲಿ ವಿವರಿಸಲಾಗಿದೆ.