ದಿಲ್ಲಿ ವಿವಿ | ಚುನಾವಣಾ ಫಲಿತಾಂಶ ಘೋಷಣೆಯಾಗಬೇಕಿದ್ದರೆ ಕಸ ಸ್ವಚ್ಛಗೊಳಿಸಿ: ವಿವಿ ವಿದ್ಯಾರ್ಥಿ ಸಂಘಟನೆಗೆ ಹೈಕೋರ್ಟ್ ಸೂಚನೆ
PC : PTI
ಹೊಸದಿಲ್ಲಿ: ವಿದ್ಯಾರ್ಥಿ ಸಂಘಟನೆಯ ಚುನಾವಣಾ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೃಷ್ಟಿಯಾಗಿರುವ ಕಸವನ್ನು ಸ್ವಚ್ಛಗೊಳಿಸಿದರೆ ಮಾತ್ರ ಚುನಾವಣಾ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ಬುಧವಾರ ದಿಲ್ಲಿ ಹೈಕೋರ್ಟ್ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಂಘಟನೆ(DUSU)ಗೆ ಸೂಚನೆ ನೀಡಿದೆ.
ಸೆಪ್ಟೆಂಬರ್ 26ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಗೆ ತಡೆ ನೀಡಿದ್ದ ದಿಲ್ಲಿ ಹೈಕೋರ್ಟ್, ಇಂತಹ ಉಲ್ಲಂಘನೆಗಳನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಲು ಕೈಗೊಳ್ಳಲಾಗಿದೆಯೆ ಹೊರತು, ಚುನಾವಣಾ ಪ್ರಕ್ರಿಯೆಯನ್ನು ಮೊಟಕುಗೊಳಿಸುವುದಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿತ್ತು.
ಎಲ್ಲೆಂದರಲ್ಲಿ ಕಸ ಹಾಕುತ್ತಿರುವುದರಿಂದಲೇ ನಗರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಗಳು ಉಂಟಾಗುತ್ತಿದೆ. ಡೆಂಗ್ಯೂ, ಮಲೇರಿಯಾ ಹರಡುತ್ತಿದೆ. ಚುನಾವಣೆಯು ಪ್ರಜಾತಂತ್ರದ ಹಬ್ಬವಾಗಿದೆ. ಅದು ಅಕ್ರಮ ಹಣ ವರ್ಗಾವಣೆಯ ಹಬ್ಬವಾಗಬಾರದು ಎಂದು ಪೀಠವು ಸ್ಪಷ್ಟಪಡಿಸಿತು.
“ನೀವೇಕೆ ಕಸವನ್ನು ಸ್ವಚ್ಛಗೊಳಿಸುತ್ತಿಲ್ಲ? ನೀವು ಕಸವನ್ನು ಸ್ವಚ್ಛಗೊಳಿಸಿದ ಮರುದಿನವೇ ಮತ ಎಣಿಕೆ ನಡೆಸಲು ನಾವು ಅವಕಾಶ ನೀಡುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾ. ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿತು.
ಚುನಾವಣಾ ಫಲಿತಾಂಶವನ್ನು ಘೋಷಿಸಬೇಕು ಎಂದು ದಿಲ್ಲಿ ವಿಶ್ವವಿದ್ಯಾಲಯದ ಎರಡು ಪ್ರತ್ಯೇಕ ಕಾಲೇಜುಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ನಡೆಸುತ್ತಿದೆ.
ಈ ಸಂಬಂಧ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಲು ಅರ್ಜಿದಾರ ವಿದ್ಯಾರ್ಥಿಗಳು, ದಿಲ್ಲಿ ಮಹಾನಗರ ಪಾಲಿಕೆ ಹಾಗೂ ದಿಲ್ಲಿ ಮೆಟ್ರೊ ರೈಲು ನಿಗಮಕ್ಕೆ ಕಾಲಾವಕಾಶ ನೀಡಿದ ನ್ಯಾಯಾಲಯ, ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿತು.