ದಿಲ್ಲಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗೆ ನಡೆದ ಚುನಾವಣೆ 'ಅಸಂವಿಧಾನಿಕ': ಸಿಎಂ ಅತಿಶಿ
ದಿಲ್ಲಿ ಮುಖ್ಯಮಂತ್ರಿ ಅತಿಶಿ | PTI
ಹೊಸದಿಲ್ಲಿ: ದಿಲ್ಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗೆ ನಡೆದ ಚುನಾವಣೆ ಅಸಂವಿಧಾನಿಕ ಎಂದು ದಿಲ್ಲಿ ಮುಖ್ಯಮಂತ್ರಿ ಅತಿಶಿ ಆರೋಪಿಸಿದ್ದಾರೆ.
ನಿನ್ನೆ ನಡೆದ ಚುನಾವಣೆಯು ಕಾನೂನುಬಾಹಿರ, ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಆಕ್ಟ್ 1957ರ ಅಡಿಯಲ್ಲಿ ನಿಯಮಗಳು, ಕಾನೂನುಗಳು ಮತ್ತು ಬೈಲಾಗಳಿದೆ. ಪಾಲಿಕೆಯ ಸಭೆಯಲ್ಲಿ ಸ್ಥಾಯಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ ಎಂದು ಅತಿಶಿ ಹೇಳಿದ್ದಾರೆ.
ಆಡಳಿತಾರೂಢ ಎಎಪಿ ಮತ್ತು ಕಾಂಗ್ರೆಸ್ನ ಕೌನ್ಸಿಲರ್ಗಳು ಚುನಾವಣೆಯನ್ನು ಬಹಿಷ್ಕರಿಸಿದ ನಂತರ ದಿಲ್ಲಿಯ ಮುನ್ಸಿಪಲ್ ಕಾರ್ಪೊರೇಷನ್ನ 18 ಸದಸ್ಯರ ಸ್ಥಾಯಿ ಸಮಿತಿಯ ಕೊನೆಯ ಸ್ಥಾನವನ್ನು ಬಿಜೆಪಿ ಅವಿರೋಧವಾಗಿ ಗೆದ್ದುಕೊಂಡಿದೆ.
ಪಾಲಿಕೆಗೆ ಚುನಾವಣೆಯ ದಿನಾಂಕ ಮತ್ತು ಸಮಯವನ್ನು ನಿರ್ಧರಿಸುವುದು ಮೇಯರ್ ಕೈಯಲ್ಲಿರಬೇಕು. ಸ್ಥಾಯಿ ಸಮಿತಿಯು ಮಹಾನಗರ ಪಾಲಿಕೆಯಲ್ಲಿ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. 5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದ ನೀತಿ ಪ್ರಸ್ತಾವನೆಗಳಿಗೆ ಸ್ಥಾಯಿ ಸಮಿತಿಯ ಅನುಮೋದನೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಪಾಲಿಕೆಯ ನಿಯಮದ ಪ್ರಕಾರ ಸಭೆಗೆ 72 ಗಂಟೆಗಳ ಮೊದಲು ಪ್ರತಿ ಕೌನ್ಸಿಲರ್ಗೆ ನೋಟಿಸ್ ಕಳುಹಿಸಬೇಕಾಗಿತ್ತು, ಆದರೆ ಅದನ್ನು ಪಾಲಿಸಲಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಆರೋಪಿಸಿದ್ದರು.
ದಿಲ್ಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯಲ್ಲಿ ಪ್ರಸ್ತುತ ಬಿಜೆಪಿ 10 ಸದಸ್ಯರನ್ನು ಹೊಂದಿದ್ದು, ಆಡಳಿತಾರೂಢ ಎಎಪಿ ಕೇವಲ 8 ಸದಸ್ಯರನ್ನು ಮಾತ್ರ ಹೊಂದಿದೆ. ಇದರರ್ಥ ಸಮಿತಿಯಲ್ಲಿ ಪ್ರಸ್ತಾಪಗಳನ್ನು ಅನುಮೋದಿಸುವಲ್ಲಿ ಬಿಜೆಪಿ ಹೆಚ್ಚು ಪ್ರಭಾವವನ್ನು ಬೀರುತ್ತದೆ.