ದಿಲ್ಲಿಯಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ ಉಲ್ಬಣಕ್ಕೆ ಬಿಜೆಪಿಯ ಕೊಳಕು ರಾಜಕೀಯ ಕಾರಣ : ಸಿಎಂ ಅತಿಶಿ
ಸಿಎಂ ಅತಿಶಿ | PC : PTI
ಹೊಸದಿಲ್ಲಿ : ದಿಲ್ಲಿಯಲ್ಲಿ ವಾಯುಮಾಲಿನ್ಯ ಹಾಗೂ ಜಲಮಾಲಿನ್ಯವು ಉಲ್ಬಣಿಸುತ್ತಿರುವುದಕ್ಕೆ ಬಿಜೆಪಿಯ ‘ಕೊಳಕು ರಾಜಕೀಯ’ ಕಾರಣವೆಂದು ಮುಖ್ಯಮಂತ್ರಿ ಅತಿಶಿ ಅವರು ರವಿವಾರ ತಿಳಿಸಿದ್ದಾರೆ.
ಚಳಿಗಾಲದ ಆಗಮನದೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವು ಹದಗೆಡಲು ಆರಂಭಿಸುತ್ತದೆ. ಕಾಲಿಂದಿಕುಂಜ್ ಸೇರಿದಂತೆ ವಿವಿಧೆಡೆ ಯಮುನಾ ನದಿಯಲ್ಲಿ ವಿಷಕಾರಿ ರಾಸಾಯನಿಕದ ನೊರೆಯ ದಪ್ಪ ಪದರಗಳು ಆವರಿಸಿಕೊಳ್ಳುತ್ತವೆ. ಹರ್ಯಾಣ ಹಾಗೂ ಉತ್ತರಪ್ರದೇಶ ರಾಜ್ಯಗಳಿಂದ ವಿಸರ್ಜಿಸಲಾಗುವ ಕೈಗಾರಿಕಾ ತ್ಯಾಜ್ಯವೇ ಇದಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.
ಪಂಜಾಬ್ನ ಆಡಳಿತಾರೂಢ ಆಪ್ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿರುವ ಅತಿಶಿ ಅವರು, ದಿಲ್ಲಿಯಲ್ಲಿ ವಾಯು ಗುಣಮಟ್ಟ ಕಳಪೆಯಾಗಲು ಬಿಜೆಪಿ ಸರಕಾರವಿರುವ ಹರ್ಯಾಣದ ಹೊಲಗಳಲ್ಲಿ ಪೈರಿನ ಕೂಳೆಗಳ ಸುಡುವಿಕೆ, ಡೀಸೆಲ್ ಬಸ್ಗಳ ಓಡಾಟ ಹಾಗೂ ಇಟ್ಟಿಗೆ ತಯಾರಿಯ ಕುಲುಮೆಗಳು ಕಾರಣವೆಂದು ಅವರು ಆಪಾದಿಸಿದ್ದಾರೆ.
ಹರ್ಯಾಣದಲ್ಲಿ ಯಮುನಾನದಿಗೆ ಸಂಸ್ಕರಿಸದೆ ಇರುವ ಕೈಗಾರಿಕಾ ತ್ಯಾಜ್ಯನೀರನ್ನು ಬಿಡುತ್ತಿರುವುದರಿಂದ ದಿಲ್ಲಿಯಲ್ಲಿ ನದಿನೀರಿನಲ್ಲಿ ನೊರೆಯ ಪದರಗಳು ಉಂಟಾಗುತ್ತಿವೆ ಎಂದು ಅತಿಶಿ ದೂರಿದರು.
ಹರ್ಯಾಣವು ಬಾದ್ಶಾಪುರ, ಮುಂಗೇಶಪುರ ಮತ್ತಿತರ ಕಾಲುವೆಗಳಿಂದ ಪ್ರತಿದಿನ ಯಮುನೆಗೆ 165 ದಶಲಕ್ಷ ಸಂಸ್ಕರಿಸದೆ ಇರುವ ಕೈಗಾರಿಕಾ ತ್ಯಾಜ್ಯವನ್ನು ಬಿಡುಗಡೆಗೊಳಿಸುತ್ತದೆ. ಉತ್ತರಪ್ರದೇಶ ಕೂಡಾ ಪ್ರತಿದಿನ 65 ಮಿಲಿಯ ಮಾಲಿನ್ಯ ಜಲವನ್ನು ಯಮುನೆಗೆ ಸುರಿಯುತ್ತಿದೆ ಎಂದು ಅತಿಷಿ ಆರೋಪಿಸಿದರು.
ದಿಲ್ಲಿಯಲ್ಲಿ ಹೆಚ್ಚುತ್ತಿರುವ ವಾಯು ಹಾಗೂ ಜಲ ಮಾಲಿನ್ಯಕ್ಕೆ ಬಿಜೆಪಿಯ ಕೊಳಕು ರಾಜಕೀಯ ಕಾರಣವಾಗಿದೆ. ಆದರೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ನಗರದ ಜನತೆಯ ನೆರವಿಗೆ ಬದ್ಧವಾಗಿದೆ ಎಂದರು.
ಪಂಜಾಬ್ನಲ್ಲಿ ಅಕ್ಟೋಬರ್ 1ರಿಂದ 15ನೇ ತಾರೀಕಿನವರೆಗೆ ಪೈರುಗಳ ಕೂಳೆಸುಡುವಿಕೆಯಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.27ರಷ್ಟು ಕಡಿತವಾಗಿದೆ. ಆದರೆ ಹರ್ಯಾಣದಲ್ಲಿ ಅದು ಹೊಲಗಳಲ್ಲಿ ಪೈರಿನ ಕೂಳೆಗಳ ಸುಡುವಿಕೆಯು ಕಳೆದ ವರ್ಷ 244ರಷ್ಟಿದ್ದು , ಈ ವರ್ಷ 417ಕ್ಕೇರಿದೆ. ಅದೇ ರೀತಿ ಉತ್ತರಪ್ರದೇಶದಲ್ಲಿ ಈ ಪ್ರಮಾಣವು 244ರಿಂದ 415ಕ್ಕೇರಿದೆ ಎಂದರು.