ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಸಿಎಂ ಬೀರೇನ್ ಸಿಂಗ್-ಪ್ರಧಾನಿ ಮೋದಿ ಮೊದಲ ಭೇಟಿ
ಮಣಿಪುರ ಹಿಂಸಾಚಾರ ಕುರಿತು ಚರ್ಚೆ
ಸಿಎಂ ಬೀರೇನ್ ಸಿಂಗ್-ಪ್ರಧಾನಿ ಮೋದಿ | PTI
ಹೊಸದಿಲ್ಲಿ: ಮಣಿಪುರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯಲ್ಲಿ ಮುಖಾಮುಖಿ ಭೇಟಿಯಾಗಿ ರಾಜ್ಯದಲ್ಲಿಯ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಉಭಯ ನಾಯಕರ ಮೊದಲ ಭೇಟಿಯಾಗಿದೆ.
ಬಿಜೆಪಿ ಮುಖ್ಯಮಂತ್ರಿಗಳ ಸಭೆಯ ನೇಪಥ್ಯದಲ್ಲಿ ಉಭಯ ನಾಯಕರು ಮುಚ್ಚಿದ ಕೊಠಡಿಯಲ್ಲಿ ಮಾತುಕತೆಗಳನ್ನು ನಡೆಸಿದರು. ಈ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೂ ಉಪಸ್ಥಿತರಿದ್ದು,ಮಣಿಪುರ ಬಿಕ್ಕಟ್ಟಿಗೆ ಸಂಭಾವ್ಯ ಪರಿಹಾರದ ಕುರಿತು ಚರ್ಚಿಸಲಾಗಿದೆ ಎಂದು ವರದಿಯು ತಿಳಿಸಿದೆ.
ಮಣಿಪುರ ಬಿಕ್ಕಟ್ಟನ್ನು ನಿವಾರಿಸುವಂತೆ ಕೇಂದ್ರದ ಮೇಲೆ ಪ್ರತಿಪಕ್ಷಗಳ ಹೆಚ್ಚುತ್ತಿರುವ ಒತ್ತಡದ ನಡುವೆ ಈ ಭೇಟಿ ನಡೆದಿದೆ. ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್, ತಾನು ಅಧಿಕಾರಕ್ಕೆ ಬಂದರೆ ಮಣಿಪುರ ಸರಕಾರವನ್ನು ವಿಸರ್ಜಿಸುವುದಾಗಿ ಘೋಷಿಸಿತ್ತು.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಕೂಡ ಚುನಾವಣೆಗಳ ಬಳಿಕ ಮಣಿಪುರಕ್ಕೆ ಭೇಟಿ ನೀಡಿದ್ದು,ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾವಿಸುವುದಾಗಿ ಹೇಳಿದ್ದರು.
ರವಿವಾರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್,ಉಕ್ರೇನ್-ರಶ್ಯಾ ಯುದ್ಧದ ನಡುವೆ ಉಕ್ರೇನ್ಗೆ ಭೇಟಿ ನೀಡಲು ಉದ್ದೇಶಿಸಿರುವ ಪ್ರಧಾನಿಯವರನ್ನು ರಾಜ್ಯಕ್ಕೆ ಭೇಟಿ ನೀಡುವಂತೆ ಮಣಿಪುರ ಮುಖ್ಯಮಂತ್ರಿಗಳು ಆಹ್ವಾನಿಸಿದ್ದಾರೆಯೇ ಎಂದು ಪ್ರಶ್ನಿಸಿತ್ತು.