ಆರೆಸ್ಸೆಸ್ ಮುಖಂಡರ ಭೇಟಿಗೆ ಎಡಿಜಿಪಿಯನ್ನು ನಿಯೋಜಿಸಿದ ಕೇರಳ ಸಿಎಂ: ವಿ.ಡಿ. ಸತೀಶನ್ ಗಂಭೀರ ಆರೋಪ
ವಿ ಡಿ ಸತೀಶನ್ (PTI)
ತಿರುವನಂತಪುರಂ: ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಎಡಿಜಿಪಿ ಎಂಆರ್ ಅಜಿತ್ ಕುಮಾರ್ ವಿರುದ್ಧ ಪ್ರತಿಪಕ್ಷದ ನಾಯಕ ವಿ ಡಿ ಸತೀಶನ್ ಗಂಭೀರ ಆರೋಪ ಮಾಡಿದ್ದು, ಆರೆಸ್ಸೆಸ್ ಮುಖಂಡರೊಬ್ಬರನ್ನು ಭೇಟಿ ಮಾಡಲು ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಅವರನ್ನು ಕೇರಳ ಸಿಎಂ ನಿಯೋಜಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತಿರುವನಂತಪುರಂ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸತೀಶನ್, ಸಿಎಂ ಪಿಣರಾಯಿ ವಿಜಯನ್ ಆರೆಸ್ಸೆಸ್ ಮುಖಂಡರೊಬ್ಬರನ್ನು ಭೇಟಿ ಮಾಡಲು ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಅವರನ್ನು ನಿಯೋಜಿಸಿದ್ದಾರೆ. ನಿಲಂಬೂರು ಶಾಸಕ ಪಿ ವಿ ಅನ್ವರ್ ಮಾಡಿರುವ ಆರೋಪದ ಸತ್ಯಾಸತ್ಯತೆ ಸಿಬಿಐ ತನಿಖೆಯಿಂದ ಮಾತ್ರ ಬಯಲಾಗುತ್ತದೆ ಎಂದು ಪುನರುಚ್ಚರಿಸುತ್ತಿದ್ದೇನೆ, ಮುಖ್ಯಮಂತ್ರಿ ವಿಜಯನ್, ಅಜಿತ್ ಕುಮಾರ್ ಅವರಿಗೆ ಆರೆಸ್ಸೆಸ್ ಆಶೀರ್ವಾದ ಇರುವುದರಿಂದ ಅವರನ್ನು ರಕ್ಷಿಸುತ್ತಿದ್ದಾರೆ. ಕಳಂಕಿತ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಪಿಣರಾಯಿ ಹೆದರುತ್ತಿದ್ದಾರೆ. ಅಜಿತ್ ಕುಮಾರ್ ಆರೆಸ್ಸೆಸ್ ನಾಯಕರ ಭೇಟಿ ಮಾಡುವ ಕುರಿತ ಸಿಸಿಟಿವಿ ದಾಖಲೆ ಪರಿಶೀಲಿಸಬೇಕಿದೆ ಎಂದು ಹೇಳಿದ್ದಾರೆ.
ತಿರುವನಂತಪುರಂನ ಆರೆಸ್ಸೆಸ್ ಮುಖಂಡರನ್ನು ಎಡಿಜಿಪಿ ಭೇಟಿಯಾಗಿದ್ದಾರೆ, ಪಿಣರಾಯಿ ಅವರು ತಮ್ಮ ಕೈಕೆಳಗಿರುವ ಅಧಿಕಾರಿಗಳಿಗೆ ಏಕೆ ಹೆದರುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಸತೀಶನ್ ಹೇಳಿದ್ದಾರೆ.