ಉತ್ತರಾಖಂಡ ವಿಧಾನಸಭೆಯಲ್ಲಿ ಸಮಾನ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ
Photo: PTI
ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಮಾನ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದರು. ರಾಜ್ಯ ವಿಧಾನಸಭೆಯ ನಾಲ್ಕು ದಿನಗಳ ವಿಶೇಷ ಅಧಿವೇಶನ ಸೋಮವಾರ ಆರಂಭಗೊಂಡಿತ್ತು. ಸಮಾನ ನಾಗರಿಕ ಸಂಹಿತೆಯ ಅಂತಿಮ ಕರಡು ಪ್ರತಿಗೆ ರಾಜ್ಯ ಸಚಿವ ಸಂಪುಟ ರವಿವಾರ ಒಪ್ಪಿಗೆ ನೀಡಿತ್ತು.
ರಾಜ್ಯದೊಳಗೆ ಎಲ್ಲಾ ಸಮುದಾಯಗಳಿಗೆ ಸಮಾನ ನಾಗರಿಕ ಕಾನೂನುಗಳನ್ನು ಈ ಸಂಹಿತೆ ಅನ್ವಯಿಸುತ್ತದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಸೋಮವಾರ ಸಮಾನ ನಾಗರಿಕ ಸಂಹಿತೆ ಕುರಿತು ಪ್ರತಿಕ್ರಿಯಿಸಿ ಅದು ಸಮಾಲೋಚನಾ ಪ್ರಕ್ರಿಯೆಯಲ್ಲಿದೆ ಹಾಗೂ ಕಾನೂನು ಆಯೋಗ ಅದನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದರು.
ಸಮಾನ ನಾಗರಿಕ ಸಂಹಿತೆಯ ಒಂದು ಕರಡನ್ನು ಮುಖ್ಯಮಂತ್ರಿಗೆ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ ಪಂಚ ಸದಸ್ಯರ ಪೀಠ ಹಸ್ತಾಂತರಿಸಿತ್ತು.
ಸಮಾನ ನಾಗರಿಕ ಸಂಹಿತೆಯ ಅನ್ವಯ ಎಲ್ಲಾ ಸಮುದಾಯಗಳಿಗೆ ವಿವಾಹ, ವಿಚ್ಛೇದನ, ಜಮೀನು, ಆಸ್ತಿ ಸಂಬಂಧಿಸಿದಂತೆ ಸಮಾನ ಕಾನೂನುಗಳು ಜಾರಿಗೆ ಬರಲಿವೆ.
ಸಮಾನ ನಾಗರಿಕ ಸಂಹಿತೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗುವುದು ಎಂದು 2022 ವಿಧಾನಸಭಾ ಚುನಾವಣೆ ಸಂದರ್ಭ ಬಿಜೆಪಿ ಆಶ್ವಾಸನೆ ನೀಡಿತ್ತು.