ಸಿಎಂ ಶಿಂಧೆ ಬಣದ ಅನರ್ಹತೆ ಅರ್ಜಿ : ಕಾಲಮಿತಿ ನಿಗದಿಗೊಳಿಸುವಂತೆ ಮಹಾರಾಷ್ಟ್ರ ಸ್ಪೀಕರ್ ಗೆ ಸುಪ್ರೀಂ ಸೂಚನೆ
ಸುಪ್ರೀಂಕೋರ್ಟ್ | PHOTO: PTI
ಹೊಸದಿಲ್ಲಿ: ಜೂನ್ 2022ರಲ್ಲಿ ಬಿಜೆಪಿಯೊಂದಿಗೆ ನೂತನ ಸರ್ಕಾರ ರಚನೆಗೆ ಕಾರಣರಾಗಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಬಣದ ಶಿವಸೇನೆ ಶಾಸಕರ ವಿರುದ್ಧ ಬಾಕಿಯಿರುವ ಅನರ್ಹತೆ ಅರ್ಜಿಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ನಿಗದಿಗೊಳಿಸುವಂತೆ ಸೋಮವಾರ ಮಹಾರಾಷ್ಟ್ರ ವಿಧಾನಸಭಾಧ್ಯಕ್ಷರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಎಂದು indianexpress.com ವರದಿ ಮಾಡಿದೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಮೇ 11ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾ.ಪಾರ್ದಿವಾಲ ಮತ್ತು ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು, ಅನರ್ಹತೆ ಅರ್ಜಿ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ನೀಡಿದ್ದ ಸೂಚನೆಯನ್ನು ಪ್ರಸ್ತಾಪಿಸಿದೆ.
ವಿಧಾನಸಭಾಧ್ಯಕ್ಷರು ಸುಪ್ರೀಂಕೋರ್ಟ್ ನ ಘನತೆಗೆ ಗೌರವ ನೀಡಬೇಕು ಹಾಗೂ ಅದರ ತೀರ್ಪಿಗೆ ಬದ್ಧವಾಗಿರಬೇಕು ಎಂದೂ ನ್ಯಾಯಪೀಠವು ಹೇಳಿದೆ.
ವಿಧಾನಸಭಾಧ್ಯಕ್ಷರ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಗೆ ಬಾಕಿಯಿರುವ ಅನರ್ಹತೆ ಅರ್ಜಿಯನ್ನು ವಿಲೇವಾರಿ ಮಾಡಲು ವಿಧಾನಸಭಾಧ್ಯಕ್ಷರು ಕಾಲಮಿತಿಯನ್ನು ನಿಗದಿಗೊಳಿಸಬೇಕು ಎಂಬ ಮಾಹಿತಿಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತು.
“ಸುಪ್ರೀಂಕೋರ್ಟ್ ನೀಡಿರುವ ಸೂಚನೆಗಳಿಗೆ ನಾವು ವಿಧೇಯತೆ ಹಾಗೂ ಘನತೆ ಎತ್ತಿ ಹಿಡಿಯುವ ಕ್ರಮಗಳನ್ನು ಅಪೇಕ್ಷಿಸುತ್ತೇವೆ” ಎಂದು ಹೇಳಿರುವ ನ್ಯಾಯಪೀಠವು, ಶಿಂದೆ ಹಾಗೂ ಮತ್ತಿತರರ ಅನರ್ಹತೆಯನ್ನು ಕೋರಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.