ಶಿರೂರು ಭೂಕುಸಿತ: ನಾಪತ್ತೆಯಾದ ಅರ್ಜುನ್ಗಾಗಿ ಶೋಧ ಮುಂದುವರಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ
ಪಿಣರಾಯಿ ವಿಜಯನ್ / ಸಿದ್ದರಾಮಯ್ಯ (Photo credit: PTI)
ತಿರುವನಂತಪುರಂ: ಶಿರೂರು ಭೂಕುಸಿತದ ವೇಳೆ ನಾಪತ್ತೆಯಾದ ಕೇರಳದ ಲಾರಿ ಚಾಲಕ ಅರ್ಜುನ್ಗಾಗಿ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ಉತ್ತರ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಅರ್ಜುನ್ ಪತ್ತೆಯಾಗುವ ತನಕ ಶೋಧ ಕಾರ್ಯಾಚರಣೆ ಮುಂದುವರಿಸಲು ಆಗ್ರಹಿಸಿದರು.
“ಶೋಧ ಕಾರ್ಯಾಚರಣೆಯನ್ನು ಇನ್ನಷ್ಟು ಬಲದೊಂದಿಗೆ ಹಾಗೂ ಅಗತ್ಯ ಎಲ್ಲಾ ಸಲಕರಣೆಗಳೊಂದಿಗೆ ಮುಂದುವರಿಸಲು ಮನವಿ ಮಾಡುತ್ತೇನೆ,” ಎಂದು ವಿಜಯನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಕೇರಳ ಲೋಕೋಪಯೋಗಿ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ಅವರು ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿ ಕರ್ನಾಟಕ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರಲ್ಲದೆ ಜಂಟಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಕಾರ್ಯಗತಗೊಳಿಸುವ ಬದಲು ಶೋಧ ಕಾರ್ಯಾಚರಣೆಯನ್ನು ನಿಲ್ಲಿಸುವ ಏಕಪಕ್ಷೀಯ ನಿರ್ಧಾರವನ್ನು ಉತ್ತರ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ ಎಂದು ಆರೋಪಿಸಿದರು.
ಮುಳುಗು ತಜ್ಞರಿಗೆ ಉಕ್ಕಿ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಸಾಗಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಶೋಧವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ರವಿವಾರ ಹೇಳಿತ್ತು.
ಆದರೆ ನಾಪತ್ತೆಯಾಗಿರುವ ಅರ್ಜುನ್ ಹಾಗೂ ಇತರ ಇಬ್ಬರು ಸ್ಥಳೀಯರಿಗೆ ಶೋಧ ಮುಂದುವರಿಯಲಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಗಂಗಾವಳಿ ನದಿ ನೀರಿನ ರಭಸ ಹೆಚ್ಚಾಗಿದ್ದರೂ ಶೋಧ ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.