ಕೋಚಿಂಗ್ ಸೆಂಟರ್ಗಳು ʼಡೆತ್ ಚೇಂಬರ್ʼಗಳಾಗಿ ಬಿಟ್ಟಿವೆ: ಸುಪ್ರೀಂ ಕೋರ್ಟ್
ಕೇಂದ್ರ, ದಿಲ್ಲಿ ಆಡಳಿತಗಳಿಗೆ ನೋಟಿಸ್ ► ಕೋಚಿಂಗ್ ಸೆಂಟರ್ ಫೆಡರೇಷನ್ ಅರ್ಜಿ ವಜಾ, 1 ಲಕ್ಷ ರೂ. ದಂಡ ಹೇರಿದ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ದಿಲ್ಲಿಯ ಕೋಚಿಂಗ್ ಸೆಂಟರ್ನ ತಳಅಂತಸ್ತಿಗೆ ಇತ್ತೀಚೆಗೆ ಮಳೆ ನೀರು ನುಗ್ಗಿ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣದ ಕುರಿತಂತೆ ಇಂದು ತನ್ನ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೋಚಿಂಗ್ ಸೆಂಟರ್ಗಳು “ಡೆತ್ ಚೇಂಬರ್”ಗಳಾಗಿ ಬಿಟ್ಟಿವೆ ಹಾಗೂ ಅವುಗಳು ವಿದ್ಯಾರ್ಥಿಗಳ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಹೇಳಿದೆ.
ಈ ಘಟನೆ ಎಲ್ಲರ ಕಣ್ಣು ತೆರೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರ ಹೊಂದಿರದ ಕೋಚಿಂಗ್ ಸೆಂಟರ್ಗಳನ್ನು ಮುಚ್ಚಬೇಕು ಎಂದು ದಿಲ್ಲಿ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕೋಚಿಂಗ್ ಸೆಂಟರ್ ಫೆಡರೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಫೆಡರೇಷನ್ ಮನವಿಯನ್ನು ವಜಾಗೊಳಿಸಿದೆಯಲ್ಲದೆ ಅರ್ಜಿದಾರನಿಗೆ ರೂ. 1 ಲಕ್ಷ ದಂಡ ವಿಧಿಸಿದೆ.
ಕೋಚಿಂಗ್ ಸೆಂಟರ್ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿ ದಿಲ್ಲಿ ಮುಖ್ಯ ಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
ಸುರಕ್ಷತಾ ನಿಯಮಗಳನ್ನು ಪಾಲಿಸದ ಕೋಚಿಂಗ್ ಸೆಂಟರ್ಗಳಿದ್ದರೆ ಅವುಗಳು ಆನ್ಲೈನ್ ಮೂಲಕ ಬೋಧನೆ ನಡೆಸಬೇಕು ಎಂದು ಹೇಳಿದ ಸುಪ್ರೀಂ ಕೋರ್ಟ್ ಪ್ರಸ್ತುತ ಈ ರೀತಿಯ ಕ್ರಮಕೈಗೊಳ್ಳಲಾಗುತ್ತಿಲ್ಲ ಎಂದು ಹೇಳಿದೆ.
ದಿಲ್ಲಿಯ ಹಳೆ ರಾಜೇಂದ್ರ ನಗರ್ ಪ್ರದೇಶದಲ್ಲಿರುವ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್ನಲ್ಲಿ ಜುಲೈ 27ರಂದು ಸಂಭವಿಸಿದ ದುರಂತದಲ್ಲಿ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಹಾಗೂ ನವೀನ್ ದೆಲ್ವಿನ್ (28) ಮೃತಪಟ್ಟಿದ್ದರು.