ಮೇಲಾಧಾರ ರಹಿತ ಕೃಷಿಸಾಲ ಮಿತಿ ಎರಡು ಲಕ್ಷ ರೂ.ಗೆ ಹೆಚ್ಚಳ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಹೆಚ್ಚುತ್ತಿರುವ ಕೃಷಿವೆಚ್ಚಗಳ ನಡುವೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗುವ ಉದ್ದೇಶದಿಂದ ಆರ್ಬಿಐ ಮೇಲಾಧಾರ ರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದು,ಇದು 2025,ಜ.1ರಿಂದ ಜಾರಿಗೆ ಬರಲಿದೆ.
ಎರಡು ಲಕ್ಷ ರೂ.ವರೆಗಿನ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗಾಗಿ ಮೇಲಾಧಾರ ಮತ್ತು ಮಾರ್ಜಿನ್ ಅಗತ್ಯಗಳನ್ನು ಕೈಬಿಡುವಂತೆ ಆರ್ಬಿಐ ದೇಶಾದ್ಯಂತ ಬ್ಯಾಂಕುಗಳಿಗೆ ಸೂಚಿಸಿದೆ.
ಹೆಚ್ಚುತ್ತಿರುವ ಕೃಷಿ ವೆಚ್ಚಗಳು ಮತ್ತು ರೈತರಿಗೆ ಸಾಲ ಲಭ್ಯತೆಯನ್ನು ಹೆಚ್ಚಿಸುವ ಅಗತ್ಯಕ್ಕೆ ಪೂರಕವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕ್ರಮವು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಳಗೊಂಡಿರುವ ಶೇ.86ರಷ್ಟು ರೈತರಿಗೆ ಗಮನಾರ್ಹವಾಗಿ ನೆರವಾಗಲಿದೆ ಎಂದು ಕೃಷಿ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ನೂತನ ಮಾರ್ಗಸೂಚಿಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಮತ್ತು ಈ ಬಗ್ಗೆ ರೈತರಲ್ಲಿ ವ್ಯಾಪಕ ಅರಿವನ್ನು ಮೂಡಿಸುವಂತೆ ಬ್ಯಾಂಕುಗಳಿಗೆ ತಿಳಿಸಲಾಗಿದೆ.
ಸರಕಾರದ ಈ ಕ್ರಮದಿಂದ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳು ಸುಲಭವಾಗಿ ಲಭ್ಯವಾಗುವ ನಿರೀಕ್ಷೆಯಿದ್ದು,ಶೇ.4ರಷ್ಟು ಪರಿಣಾಮಕಾರಿ ಬಡ್ಡಿಯೊಂದಿಗೆ ಮೂರು ಲಕ್ಷ ರೂ.ವರೆಗೆ ಸಾಲಗಳನ್ನು ಒದಗಿಸುವ ಪರಿಷ್ಕೃತ ಬಡ್ಡಿ ಸಹಾಯಧನ ಯೋಜನೆಗೆ ಪೂರಕವಾಗಲಿದೆ.
ಸರಕಾರದ ಈ ಉಪಕ್ರಮವನ್ನು ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವ ,ಕೃಷಿ ಕಾರ್ಯಗಳಲ್ಲಿ ಹೂಡಿಕೆಗಾಗಿ ರೈತರಿಗೆ ಬಹು ಅಗತ್ಯವಾದ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಅವರ ಜೀವನೋಪಾಯಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸರಕಾರದ ಈ ಕ್ರಮವು ರೈತರಿಗೆ ಸಾಲ ಲಭ್ಯತೆಯನ್ನು ಹೆಚ್ಚಿಸುವ,ಕೃಷಿ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಮತ್ತು ಕೃಷಿ ವೆಚ್ಚಗಳ ಮೇಲೆ ಹಣದುಬ್ಬರ ಒತ್ತಡಗಳನ್ನು ನೀಗಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಿಸಿದ್ದಾರೆ.